ಡೈಲಿ ವಾರ್ತೆ: 06/ಆಗಸ್ಟ್/2024

ಭಟ್ಕಳ ದಿಂದ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್ ಬೆಂಕಿಗಾಹುತಿ – ತಪ್ಪಿದ ದುರಂತ

ಸಾಗರ: ಪ್ರಯಾಣಿಕರನ್ನು ಹೊತ್ತು ಸಾಗುತಿದ್ದ ಸಾರಿಗೆ ಬಸ್ಸೊಂದು ಬೆಂಕಿಗಾಹುತಿಯಾದ ಘಟನೆ ಸಾಗರ ಪಟ್ಟಣದ ಜೋಗ ರಸ್ತೆಯ ಕೆಎಸ್ ಆರ್ ಟಿಸಿ ಡಿಪೋ ಬಳಿ ಮಂಗಳವಾರ (ಆಗಸ್ಟ್ 6) ಬೆಳಿಗ್ಗೆ ಸಂಭವಿಸಿದೆ.

ಭಟ್ಕಳದಿಂದ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ಹೊರಟಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಸಾಗರ ಪಟ್ಟಣದ ಜೋಗ ರಸ್ತೆಯ ಕೆಎಸ್ ಆರ್ ಟಿಸಿ ಡಿಪೋ ಬಳಿ ಬರುತ್ತಿದ್ದಂತೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಎಚ್ಚೆತ್ತ ಬಸ್ಸು ಚಾಲಕ ಬಸ್ಸನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ.

ಬಸ್ಸಿನಲ್ಲಿ ಸುಮಾರು 12 ಜನ ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದ್ದು ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಳಿಕ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿ ಹೆಚ್ಚಿನ ಅವಘಡ ತಪ್ಪಿಸಿದ್ದಾರೆ.