ಡೈಲಿ ವಾರ್ತೆ: 23/ಆಗಸ್ಟ್/2024

ಚೇರ್ಕಾಡಿ: ಅರ್ಚಕರ ಅಧೀನವಾಗುತ್ತಿರುವ ಕನ್ನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಏಕವ್ಯಕ್ತಿಯ ಹತೋಟಿಗೆ ಪಡೆಯಲು ಯತ್ನ

ಉಡುಪಿ ಜಿಲ್ಲೆಯ ಪುರಾತನ ದೇವಸ್ಥಾನಗಳಲ್ಲಿ ಒಂದಾದ, ಬ್ರಹ್ಮಾವರ ತಾಲೂಕು, ಚೇರ್ಕಾಡಿ ಗ್ರಾಮದ ಕನ್ನಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಒಡೆತನಕ್ಕೆ ಸಂಬಂಧಿಸಿದಂತೆ ಇದೀಗ ವಿವಾದವೊಂದು ತಲೆಎತ್ತಿದೆ. ಮುಜರಾಯಿ ಇಲಾಖೆಯ ಅಧೀನಕ್ಕೊಳಪಟ್ಟ ಈ ದೇವಸ್ಥಾನದಲ್ಲಿ ಕಾಲಕಾಲಕ್ಕೆ ಮುಜರಾಯಿ ಕಾಯಿದೆಗನುಗುಣವಾಗಿ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಇದೀಗ ಅರ್ಚಕ ಕುಟುಂಬದ ವ್ಯಕ್ತಿಯೊರ್ವರು ದೇವಸ್ಥಾನವು ತಮ್ಮ ಕುಟುಂಬದ ಅನುವಂಶೀಯ ಹಕ್ಕಿನದ್ದಾಗಿದ್ದು, ಅದನ್ನು ಇಲಾಖೆ ತಮ್ಮ ವಶಕ್ಕೆ ನೀಡಬೇಕು ಎಂಬ ಆಗ್ರಹ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಇದಕ್ಕೆ ಪೂರಕವಾದ ಆದೇಶ ಪತ್ರವನ್ನೂ ಹೊಂದಿದ್ದಾರೆ ಎನ್ನಲಾಗಿದೆ! ಈ ವಿಷಯವೀಗ ದೇವಸ್ಥಾನದ ಭಕ್ತರು, ದಾನಿಗಳು, ತಲತಲಾಂತರದಿಂದ ಪೋಷಕ ಕುಟುಂಬವಾಗಿ ಗುರುತಿಸಲ್ಪಟ್ಟಿದ್ದ ಮುಡೂರು ಕುಟುಂಬದವರಲ್ಲಿ ತೀವ್ರ ಅಸಮಾಧಾನ ತಂದಿದೆ. ಈ ವಿಷಯದ ಬಗ್ಗೆ ಪೋಷಕ ಕುಟುಂಬವಾದ ಮುಡೂರು ಕುಟುಂಬದ ಸದಸ್ಯ, ಸ್ಥಳೀಯ ಬ್ರಹ್ಮಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ, ನ್ಯಾಯವಾದಿ ಮುಡೂರು ಮನೋಹರ ಶೆಟ್ಟಿ ಬ್ರಹ್ಮಾವರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ, ದೇವಾಲಯದ ಪೋಷಕ ಕುಟುಂಬದ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಕನ್ನಾರು ಶ್ರೀ ದುರ್ಗಾಪರಾಮೇಶ್ವರಿ ದೇವಾಲಯಕ್ಕೆ ಮುಡೂರು ಕುಟುಂಬವು ಪೋಷಕ ಕುಟುಂಬವಾಗಿರುತ್ತದೆ. ದೇವಳದ ಚಾಕರಿಯವರಿಗೆ ಮುಡೂರು ಕುಟುಂಬದ ಭೂಮಿಯನ್ನು ಉಂಬಳಿಯಾಗಿ ಬಿಡಲಾಗಿದೆ. ಪ್ರತಿವರ್ಷ ಅನಾದಿಕಾಲದಿಂದಲೂ ದೇವಸ್ಥಾನಕ್ಕೆ ಎಣ್ಣೆ ಮತ್ತು ಅಕ್ಕಿಯನ್ನು ಮುಡೂರು ಕುಟುಂಬದವರೇ ಒದಗಿಸುವುದು ದಾಖಲೆಗಳಿಂದ ತಿಳಿದು ಬರುತ್ತದೆ. ಅರ್ಚಕರಾಗಿ ಮಂಜರ ನೇಮಕಾತಿಯೂ ಮುಡೂರು ಕುಟುಂಬಸ್ಥರಿಂದಲೇ ನಡೆದಿರುವುದಾಗಿ ಪೂರ್ವಜರು ತಿಳಿಸಿದ್ದರು. “ಮಂಜ ಕುಟುಂಬಸ್ಥರು” ಅವರ ಕವರಿನವರಲ್ಲಿ ಮಾಡಿಕೊಂಡ ಕರಾರಿನಂತೆ ಸರತಿಯಾಗಿ ಅರ್ಚಕರಾಗಿ ಪೂಜೆ ಮಾಡುತ್ತಿದ್ದರು. ಮಂಜ ಕುಟುಂಬದ ಮೂರೂ ಕವರಿನವರಿಗೆ ಪೂಜೆಯ ಹಕ್ಕು ಮಾತ್ರಾ ಇರುತ್ತದೆ. ಪೋಷಕ/ಯಜಮಾನ ಕುಟುಂಬವಾಗಿ ಮುಡೂರು ಕುಟುಂಬಸ್ಥರು ನಡೆದುಕೊಳ್ಳುತ್ತಿದ್ದಾರೆ.

ಇತ್ತೀಚೆಗಿನ ಹಲವಾರು ವರ್ಷಗಳಿಂದ ಈ ದೇವಸ್ಥಾನವು ದಾರ್ಮಿಕ ದತ್ತಿ ಇಲಾಖೆಯ ಅಧೀನಕ್ಕೊಳ್ಳಪಟ್ಟಿದ್ದು “ಸಿ” ವರ್ಗದ ದೇವಸ್ಥಾನವಾಗಿದೆ. ಸುಮಾರು ವರ್ಷಗಳಿಂದಲೂ, ವ್ಯವಸ್ಥಾಪನಾ ಕಮಿಟಿಯು ಅಡಳಿತ ನಡೆಸುತ್ತಿದ್ದು ಅದು ದಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ಅರ್ಜಿ ಆಹ್ವಾನಿಸಿ ಪ್ರತಿ ಮೂರು ವರ್ಷ ಅವಧಿಯ ಸಮಿತಿಯು ಅಧಿಕಾರ ನಡೆಸುತ್ತಾ ಬಂದಿದೆ.

ಮಂಜ ಕುಟುಂಬದ ಒಂದು ಕವರಿನ ಸದಸ್ಯರಾದ ವೆಂಕಟೇಶ ಮಂಜರು ಅವರ ಸರದಿ ಬಂದಾಗ ದೇವಳದ ಅರ್ಚಕರಾಗಿದ್ದು ಸರಕಾರ ನಿಯುಕ್ತಿಗೊಳಿಸಿದ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿರುತ್ತಾರೆ. ಈ ಹಿಂದಿನ ಅಂದರೆ 2021 ರಿಂದ 2024ರ ಅವಧಿಯ ವ್ಯವಸ್ಥಾಪನಾ ಸಮಿತಿಯಲ್ಲಿಯೂ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ. ಅವರು ಅರ್ಚಕರೇ ಹೊರತು ಅನುವಂಶಿಕ ಮೊಕ್ತೇಸರರಾಗಿರುವುದಿಲ್ಲ. ದೇವಳ ಇರುವ ಸ್ಥಳ ಸುಮಾರು 9ಎಕ್ರೆ ಸರಕಾರದ್ದು. ಸಾರ್ವಜನಿಕ ಹಣದಿಂದ ದೇವಸ್ಥಾನ ಜೀರ್ಣೋದ್ದಾರಗೊಂಡಿದೆ. ದೇವಸ್ಥಾನ ಜನರಿಂದ ಅಭಿವೃದ್ಧಿಗೊಂಡ ಮೇಲೆ ದೇವಸ್ಥಾನ ತನ್ನದೆಂದು ಮಾಡಲು ಅರ್ಚಕರು ಹೊರಟಿರುವುದು ಅಕ್ಷಮ್ಯ ಮತ್ತು ಕಾನೂನು, ನ್ಯಾಯ, ನೀತಿಗೆ ವಿರುದ್ಧವಾಗಿದೆ.

ಈಗ ಏಕಾಏಕಿ ವ್ಯವಸ್ಥಾಪನಾ ಸಮಿತಿಯನ್ನಾಗಲೀ, ಅರ್ಚಕರ ಉಳಿದ ಸರದಿಯವರನ್ನಾಗಲೀ, (ಪ್ರಸ್ತುತ) ಆಡಳಿತಾಧಿಕಾರಿಯನ್ನಾಗಲಿ, ಕುಟುಂಬದವರನ್ನಾಗಲೀ, ಪಕ್ಷಗಾರರನ್ನಾಗಿ ಮಾಡದೇ ಧಾರ್ಮಿಕ ಪರಿಷತ್ ನ್ಯಾಯಾಧಿಕರಣದಿಂದ ಅವರು ಅನುವಂಶಿಕ ಮೊಕೇಸ್ತರ ಮತ್ತು ಅರ್ಚಕ ಎಂದು ಆದೇಶವನ್ನು ಪಡೆದುಕೊಂಡು ಬಂದು ಸಾರ್ವಜನಿಕ ದೇವಸ್ಥಾನವನ್ನು ಏಕವ್ಯಕ್ತಿಯ ಹತೋಟಿಗೆ ಪಡೆಯಲು ಯತ್ನಿಸುತ್ತಿದ್ದಾರೆ. ಇದರಿಂದ ಭಕ್ತರು ಮತ್ತು ಪೋಷಕ ಮುಡೂರು ಕುಟುಂಬಸ್ಥರು ತೀವ್ರ ವೇದನೆಗೆ ಒಳಗಾಗಿದ್ದು ಓರ್ವ ವ್ಯಕ್ತಿಯ ಸ್ವಾರ್ಥ ಸಾಧನೆಯ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ ವಾಗಿದೆ. ಕರ್ನಾಟಕ ಸರಕಾರ ಮತ್ತು ಮುಜರಾಯಿ ಮಂತ್ರಿಯವರು ಈ ಬಗ್ಗೆ ಮದ್ಯೆ ಪ್ರವೇಶಿಸಿ ಸಾರ್ವಜನಿಕ ದೇವಾಲಯದ ರಕ್ಷಣೆಗೆ ಮುಂದಾಗಬೇಕು ಎಂದು ವಿನಂತಿಸಿದ್ದಾರೆ.

ಒಂದು ವೇಳೆ ದಾರ್ಮಿಕ ದತ್ತಿ ಇಲಾಖೆಯ ಅಧೀನದಿಂದ ದೇವಳವನ್ನು ಕೈಬಿಟ್ಟಲ್ಲಿ, ಅದನ್ನು ಪೊಷಕ ಕುಟುಂಬ- ಯಜಮಾನ ಕುಟುಂಬವಾದ ಮುಡೂರು ಕುಟುಂಬದ ಆಡಳಿತಕ್ಕೆ ಒಪ್ಪಿಸಬೇಕಾಗಿ ಕೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶೇಡಿಮನೆ ಗೋಪಾಲ್ ಶೆಟ್ಟಿ, ಭುಜಂಗ ಶೆಟ್ಟಿ, ನವೀನ್ ಹೆಗ್ಡೆ ಭಾಗಿಯಾಗಿದ್ದರು.