ಡೈಲಿ ವಾರ್ತೆ: 09/ಮಾರ್ಚ್ /2025

ಚಿತ್ರದುರ್ಗ| ಲಾರಿ ಹಾಗೂ ಇನೊವಾ ಕಾರು ನಡುವೆ ಭೀಕರ ಅಪಘಾತ: ಐವರು ದುರ್ಮರಣ

ಚಿತ್ರದುರ್ಗ: ಲಾರಿ ಹಾಗೂ ಕಾರು ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ ಘಟನೆ ಮಾ. 9ರಂದು ಭಾನುವಾರ ಚಿತ್ರದುರ್ಗ ತಾಲೂಕಿನ ಸಿಬಾರ ಗ್ರಾಮದ ಬಳಿ ಸಂಭವಿಸಿದೆ.

ಬೆಂಗಳೂರು ಮೂಲದ ಬಿಎಂಟಿಸಿ ನಿವೃತ್ತ ನೌಕರ ಶಾಂತಮೂರ್ತಿ(60), ವಿದ್ಯಾರಣ್ಯಪುರದ ರುದ್ರಸ್ವಾಮಿ(52), ಬೆಂಗಳೂರು ಉತ್ತರದ ಈರಣ್ಣ ಬಡಾವಣೆಯ ಮಲ್ಲಿಕಾರ್ಜುನ(50) ಎಂದು ಮೃತರ ಗುರುತು ಪತ್ತೆಯಾಗಿದ್ದು, ಇನ್ನಿಬ್ಬರ ಗುರುತು ಇನ್ನಷ್ಟೇ ತಿಳಿದುಬರಬೇಕಿದೆ.
ಚಿತ್ರದುರ್ಗ ಗ್ರಾಮಾಂತರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ಕಾರಿನಲ್ಲಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಪ್ರಸಾದ ಪತ್ತೆಯಾಗಿದೆ. ಹೀಗಾಗಿ ಅವರು ಕಾರಿನಲ್ಲಿ ಸವದತ್ತಿಯ ರೇಣುಕಾ ಯಲ್ಲಮ್ಮ‌ ದೇಗುಲಕ್ಕೆ ಹೋಗಿ ಹಿಂದಿರುಗುತ್ತಿದ್ದರು ಎನ್ನಲಾಗಿದೆ. ಇನ್ನು ಕಾರಿನಲ್ಲಿದ್ದ ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.