



ಡೈಲಿ ವಾರ್ತೆ: 09/ಮಾರ್ಚ್ /2025


ವಿದ್ಯಾರ್ಥಿ ದಿಗಂತ್ ಮನೆಬಿಟ್ಟು
ಹೋಗಿದ್ದೆಲ್ಲಿಗೆ? ರಕ್ತದ ಕಲೆಯ ಹಿಂದಿನ ಕಥೆಯೇನು?
ಮಾಹಿತಿ ನೀಡಿದ ಎಸ್.ಪಿ
ಬಂಟ್ವಾಳ| ಫರಂಗಿಪೇಟೆ ದಿಗಂತ್ ನಾಪತ್ತೆ ಪ್ರಕರಣ ಸುಖಾಂತ್ಯವಾಗಿದೆ. ನಾಪತ್ತೆಯಾಗಿದ್ದ ಬಾಲಕ ದಿಗಂತ್ ಮಾ. 8 ರಂದು ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ.
ದಿಗಂತ್ ನಾಪತ್ತೆ ಪ್ರಕರಣದ ಬಗ್ಗೆ ಹಲವು ಊಹಾಪೋಹಗಳು ಎದ್ದಿತ್ತು. ಪತ್ತೆಯಾದ ಬಳಿಕವೂ ಹಲವು ಅನುಮಾನಗಳು ಜನರಲ್ಲಿ ಕಾಡಿತ್ತು. ರವಿವಾರ (ಮಾ.09) ಸುದ್ದಿಗೋಷ್ಠಿ ನಡೆಸಿದ ದ.ಕ.ಜಿಲ್ಲಾ ಎಸ್ ಪಿ ಯತೀಶ್ ಎನ್ ತನಿಖೆಯ ಬಗ್ಗೆ ವಿವರಣೆ ನೀಡಿದ್ದಾರೆ.
ನಾಪತ್ತೆ ಬಳಿಕ ಬಂಟ್ವಾಳ ಡಿವೈಎಸ್ ಪಿ ನೇತೃತ್ತದಲ್ಲಿ ಏಳು ತಂಡ ತನಿಖೆ ನಡೆಸಿತ್ತು. 10 ದಿನಗಳ ಕಾಲ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದೆವು.
ಕಾಣೆಯಾಗಿದ್ದ ದಿಗಂತ್ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ವಿಚಾರಣೆ ನಡೆಸಿದಾಗ ಸಾಕಷ್ಟು ಮಾಹಿತಿ ತಿಳಿಸಿದ್ದಾನೆ. ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಹಿನ್ನೆಲೆಯಲ್ಲಿ ಹೆದರಿದ್ದಾಗಿ ದಿಗಂತ್ ಹೇಳಿದ್ದಾನೆ ಎಂದರು.
ಮಂದಿರಕ್ಕೆ ಹೋಗುವುದಾಗಿ ಮನೆಯಿಂದ ರೈಲ್ವೇ ಟ್ರಾಕ್ ಬಳಿ ಬಂದು ಬೈಕ್ ಹಿಡಿದು ಮಂಗಳೂರಿಗೆ ಬಂದಿದ್ದಾನೆ.
ಅಲ್ಲಿಂದ ಬಸ್ಸಿನಲ್ಲಿ ಶಿವಮೊಗ್ಗ ಹೋಗಿ ಅಲ್ಲಿಂದ ಮೈಸೂರಿಗೆ ಹೋಗಿದ್ದಾನೆ. ಬಳಿಕ ರೈಲಿನಲ್ಲಿ ಬೆಂಗಳೂರಿನ ಕೆಂಗೇರಿ ಹೋಗಿ ರೆಸಾರ್ಟ್ ನಲ್ಲಿ ಕೆಲಸ ಮಾಡಿದ್ದಾನೆ. ಅಲ್ಲಿಂದ ಬೆಂಗಳೂರು ತಿರುಗಿ ಮತ್ತೆ ಮೈಸೂರಿಗೆ ಬಂದು ರೈಲಿನಲ್ಲಿ ಉಡುಪಿಗೆ ಬಂದಿದ್ದಾನೆ. ಉಡುಪಿಯಲ್ಲಿ ಬಟ್ಟೆ ತೆಗೆದುಕೊಳ್ಳಲು ಮಳಿಗೆಯೊಂದಕ್ಕೆ ಹೋಗಿ ಅಲ್ಲಿ ದುಡ್ಡು ಕೊಡದೆ ಎಸ್ಕೆಪ್ ಆಗುವ ವೇಳೆ ಸಿಕ್ಕಿಕೊಂಡಿದ್ದಾನೆ ಎಂದು ಎಸ್ ಪಿ ಮಾಹಿತಿ ನೀಡಿದರು.
ಮನೆಯಿಂದ ಹೋಗುವಾಗ ದಿಗಂತ್ 500 ರೂ ತೆಗೆದುಕೊಂಡು ಹೋಗಿದ್ದಾನೆ. ಆ ಬಳಿಕ ಕೆಲವು ಕಡೆ ಟಿಕೆಟ್ ಕೊಡದೆ ಪ್ರಯಾಣ ಮಾಡಿದ್ದಾನೆ ಎಂದರು.
ರೈಲ್ವೇ ಟ್ರ್ಯಾಕ್ ಬಳಿ ರಕ್ತದ ಕಲೆ ಪತ್ತೆಯಾದ ಬಗ್ಗೆ ಮಾಹಿತಿ
ನೀಡಿದ ಎಸ್.ಪಿ:
ಅವನ ಪಾದದಲ್ಲಿ ಗಾಯವಾಗಿದ್ದು, ಅದೇ ರಕ್ತ ಚಪ್ಪಲಿಯಲ್ಲಿ ಅಂಟಿಕೊಂಡಿದೆ ಎಂದು ಆತನೇ ಹೇಳಿದ್ದಾನೆ. ಅವನನ್ನು ಯಾರೂ ಎತ್ತಿಕೊಂಡು ಹೋಗಿರಲಿಲ್ಲ, ಅವನೇ ಹೋಗಿದ್ದ. ಅವನ ಇಡೀ ಪ್ರಯಾಣದಲ್ಲಿ ಅವನು ಯಾರನ್ನೂ ಸಂಪರ್ಕ ಮಾಡಿಲ್ಲ.
ಕಲಿಯುವುದರಲ್ಲಿ ಅವನು ಹುಷಾರಿದ್ದ, ಕೆಲ ದಿನಗಳಿಂದ ಸ್ವಲ್ಪ ಮಂಕಾಗಿದ್ದ ಎಂದರು. ಸದ್ಯ ಹೈಕೋರ್ಟ್ ಹೆಬಿಯಸ್ ಕಾರ್ಪಸ್ ದಾಖಲಾಗಿರುವ ಕಾರಣ ಹೈಕೋರ್ಟ್ ಹಾಜರುಪಡಿಸಿ ಕೋರ್ಟ್ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸದ್ಯ ಅವನನ್ನು ಬೊಂದೇಲ್ ನ ಬಾಲ ಮಂದಿರದಲ್ಲಿ ಇರಿಸಲಾಗಿದೆ ಎಂದು ಎಸ್ ಪಿ ಯತೀಶ್ ಎನ್ ಮಾಹಿತಿ ನೀಡಿದರು.