

ಡೈಲಿ ವಾರ್ತೆ: 11/ಮಾರ್ಚ್ /2025


ಭಕ್ತರು ಕಳೆದುಕೊಂಡ ಮನೆ
ಆಸ್ತಿ ಪತ್ರ ದೊರೆಕಿಸಿ ಮತ್ತೆ ತನ್ನ ಪವಾಡವನ್ನು ತೋರಿಸಿದ ಸಾಸ್ತಾನದ ಕಳಿಬೈಲು ಕೊರಗಜ್ಜ

ಈಗಾಗಲೇ ಹಲವು ಪವಾಡಗಳ ಮೂಲಕ ನಂಬಿದವರ ಬೆಂಬಿಡದೆ ಇಷ್ಟಾರ್ಥ ನೆರವೇರಿಸಿದ ಕಳಿಬೈಲು ಕೊರಗಜ್ಜ ಇದೀಗ ತೆಕ್ಕಟ್ಟೆಯ ಕುಟುಂಬವೊಂದಕ್ಕೆ ತನ್ನ ಕೃಪಾ ಕಟಾಕ್ಷವನ್ನು ಬೀರಿದ್ದಾನೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕೊರಗಜ್ಜ ನೀನೇ ಗತಿ ಎಂದು ಬೇಡಿದ ಕುಟುಂಬ ಇಂದು ಪವಾಡ ಸದೃಷ ರೀತಿಯಲ್ಲಿ ಸಂಕಷ್ಟದಿಂದ ಮುಕ್ತಿ ಹೊಂದಿದೆ.

ತೆಕ್ಕಟ್ಟೆ ಮಾಲಾಡಿಯ ಕುಟುಂಬವೊಂದು ತನ್ನ ಮನೆಯ ಆಸ್ತಿ ಪತ್ರ ಕಳೆದುಕೊಂಡು ಮನೆ ಕಟ್ಟಲು ಪರದಾಡುತ್ತಿತ್ತು. ಆಸ್ತಿ ಪತ್ರಗಳಿಲ್ಲದೆ ಬ್ಯಾಂಕಿನಲ್ಲಿ ಸಾಲ ಸಿಕ್ಕಿರಲಿಲ್ಲ.
ಊರಲ್ಲಿ ಇದ್ದ ಎಲ್ಲಾ ದೇವರಿಗೂ ಹರಕೆ ಹೊತ್ತು, ಮನೆಯೆಲ್ಲಾ ಜಾಲಾಡಿದರೂ ಆಸ್ತಿ ಪತ್ರ ಸಿಗಲೇ ಇಲ್ಲ. ಇದರಿಂದಾಗಿ ಈ ಬಡ ಕುಟುಂಬಕ್ಕೆ ದೇವರ ಮೇಲಿನ ನಂಬಿಕೆಯೇ ನಶಿಸಿತ್ತು. ಹೊಸ ಮನೆ ಕಟ್ಟದೆ ಬದುಕಲಾಗದು. ಮನೆ ಕಟ್ಟಲು ಆಸ್ತಿ ಪತ್ರ ಹಾಜರುಪಡಿಸದೆ ಹಣ ಸಿಗದು. ಒಟ್ಟಿನಲ್ಲಿ ಭರವಸೆಯ ಎಲ್ಲ ಮಾರ್ಗಗಳೂ ಬಂದ್ ಆಗಿ, ಇಡೀ ಕುಟುಂಬ ಹತಾಶೆಯಿಂದ ಆತ್ಮಹತ್ಯೆಗೆ ಮನ ಮಾಡಿತ್ತು.
ಇಂತಹ ವಿಷಮ ಸನ್ನಿವೇಶದಲ್ಲಿ ಆಪತ್ ಬಾಂಧವನಂತೆ ಪವಾಡ ತೋರಿ ಇಡೀ ಕುಟುಂಬವನ್ನು ಉಳಿಸಿದ ದಿವ್ಯ ಶಕ್ತಿ ಸಾಸ್ತಾನ ಕಳಿಬೈಲ್ ಕೊರಗಜ್ಜ!

ಹೌದು, ಇದು ಕಥೆಯಲ್ಲ, ಮೈ ನವೀರೇಳಿಸುವ ನೈಜ ಘಟನೆ. ಕುಂದಾಪುರ ತಾಲೂಕಿನ ತೆಕ್ಕಟೆ ಗ್ರಾಮದ ಮಾಲಾಡಿಯ ಆಶಾಲತಾ ಎಂಬವರ ಬಡ ಕುಟುಂಬವು ಆಸ್ತಿ ಪತ್ರ ಕಳೆದುಕೊಂಡು ಮನೆ ಕಟ್ಟಲು ಬ್ಯಾಂಕಿನಲ್ಲಿ ಸಾಲ ಪಡೆಯಲು ಆಸ್ತಿ ಪತ್ರ ಇಲ್ಲದೆ ಕಂಗಲಾಗಿತ್ತು.
ಆ ಸಂಕಷ್ಟ ಸಮಯದಲ್ಲಿ ಯಾರೋ ಇವರಿಗೆ ಕಳಿಬೈಲು ಕೊರಗಜ್ಜನ ಬಗ್ಗೆ ತಿಳಿಸಿದರು. ಕಷ್ಟದಲ್ಲಿರುವವರು ನಂಬಿ ಪ್ರಾರ್ಥಿಸಿದಾಗ ಓಡೋಡಿ ಬಂದು ಕೈ ಹಿಡಿದ ಕೊರಗಜ್ಜ ತಮ್ಮ ಕುಟುಂಬವನ್ನೂ ಸಲಹದೆ ಇರನು ಎಂದು ತೀರ್ಮಾನಿಸಿದ ಆಶಾಲತಾ ತಡಮಾಡದೆ ಆತನ ಸನ್ನಿಧಿಗೆ ಬಂದು ಹರಕೆ ಮಾಡಿಕೊಂಡರು.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು, ಸಾಸ್ತಾನದ ಕೆಳಬೆಟ್ಟು ಮೂಡಹಡು ಎಂಬ ಗ್ರಾಮದಲ್ಲಿ ನೆಲೆನಿಂತ ಈ ಕೊರಗಜ್ಜ ನಂಬಿದವರ ಪಾಲಿನ ಕಾಮಧೇನು. ಶ್ರೀ ಕ್ಷೇತ್ರ ಕಳಿಬೈಲ್ ಎಂದೇ ಖ್ಯಾತವಾದ ಈ ಸನ್ನಿಧಿಯಲ್ಲಿ ತುಳಸಿ ಅಮ್ಮ, ಶಿರಸಿ ಮಾರಿಕಾಂಬೆ, ಪಂಜುರ್ಲಿಯರೂ ಸಪರಿವಾರರಾಗಿ ಜೊತೆ ನೆಲೆಸಿದ್ದಾರೆ. ಆಶಾಲತಾ ಕೊರಗಜ್ಜನ ಸನ್ನಿಧಾನಕ್ಕೆ ಬಂದು ಕಣ್ಣೀರು ಹಾಕಿ ಹರಕೆ ಇಟ್ಟು ಬೇಡಿಕೊಂಡು ಮನೆಗೆ ಪ್ರಸಾದ ತೆಗೆದುಕೊಂಡು ಹೋದರು.
ಆಶ್ಚರ್ಯವೆಂದರೆ, ಕಳೆದುಹೋಗಿದ್ದ ಆಸ್ತಿಪತ್ರ ಒಂದು ಗಂಟೆಯಲ್ಲಿ ಮನೆಯಲ್ಲಿಯೇ ಪತ್ತೆಯಾಯಿತು! ಹಲವು ಬಾರಿ ಹುಡುಕಿದ ಸ್ಥಳದಲ್ಲೇ ಆಸ್ತಿಪತ್ರ ಪ್ರತ್ಯಕ್ಷವಾಗಿ ಇವರ ಕಣ್ಣನ್ನೇ ನಂಬದ ಅಯೋಮಯ ಪರಿಸ್ಥಿತಿ ಉಂಟಾಯಿತು. ಇದು ಕಳಿಬೈಲು ಕೊರಗಜ್ಜನ ಪವಾಡ ಎಂದು ತಿಳಿಯಲು ಆಕೆಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ಮತ್ತೆ ಕ್ಷೇತ್ರಕ್ಕೆ ದೌಡಾಯಿಸಿದ ಕುಟುಂಬ ಕೊರಗಜ್ಜನಿಗೆ ಹರಕೆ ತೀರಿಸಿ, ಕೃತಜ್ಞತೆ ಸಲ್ಲಿಸಿದೆ. ಹೊಸ ಮನೆ ಹೊಂದುವ ದಾರಿ ಇದೀಗ ಕೊರಗಜ್ಜನಿಂದಾಗಿ ತೆರೆದುಕೊಂಡಿದೆ.