ಡೈಲಿ ವಾರ್ತೆ: 14/ಏಪ್ರಿಲ್/2025

ಕೋಟ| ಏ. 17 ಮತ್ತು18 ರಂದು ‘ಯಕ್ಷ ತ್ರಿವಳಿ’ ಯಕ್ಷೋತ್ಸವ ಕಾರ್ಯಕ್ರಮ

ಕೋಟ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ಸುವರ್ಣ ಪರ್ವದ ಸರಣಿ ಕಾರ್ಯಕ್ರಮವಾಗಿ ಎರಡು ದಿವಸಗಳ ಆಹ್ವಾನಿತ ತಂಡಗಳ ‘ಯಕ್ಷ ತ್ರಿವಳಿ’ ಯಕ್ಷೋತ್ಸವವನ್ನು ಇದೆ ಎಪ್ರಿಲ್ 17ರ ಗುರುವಾರ ಮತ್ತು 18ರ ಶುಕ್ರವಾರದಂದು ಕೋಟ ಮೂರುಕೈ ಹಂದೆ ಮಹಾ ವಿಷ್ಣು ವಿನಾಯಕ ದೇವಸ್ಥಾನದಲ್ಲಿ ಆಯೋಜನೆ ಮಾಡಿದೆ.

ಮೊದಲ ದಿನ ಸಂಜೆ 5:30 ಕ್ಕೆ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿಯವರ ಸಭಾ ಅಧ್ಯಕ್ಷತೆಯಲ್ಲಿ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಕಿರಣ ಕುಮಾರ ಕೊಡ್ಗಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ, ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ ಕುಂದರ್, ಉಡುಪಿ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಬಾರಿಕೆರೆ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಅಧ್ಯಕ್ಷ ಬಲರಾಮ ಕಲ್ಕೂರ, ಕಾರ್ಯಾಧ್ಯಕ್ಷ ಮಹೇಶ ಉಡುಪ, ಉಪಾಧ್ಯಕ್ಷ ಜನಾರ್ದನ ಹಂದೆ, ಅಕಾಡೆಮಿಯ ರಿಜಿಸ್ಟಾçರ್ ನಮೃತ ಎನ್, ಸದಸ್ಯ ಸಂಚಾಲಕ ರಾಘವ ಎಚ್ ಉಪಸ್ಥಿತಿಯಲ್ಲಿ ಮಕ್ಕಳ ಕ್ಷೇತ್ರದ ಅನನ್ಯ ಸಾಧಕ ಗುರು ದೇವದಾಸ ಕೂಡ್ಲಿಯವರನ್ನು ಸುವರ್ಣ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಎರಡನೆ ದಿವಸ ಸಮಾರೋಪ ಸಮಾರಂಭದಲ್ಲಿ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಮಚಂದ್ರ ಐತಾಳ, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪೂರ್ಣಿಮಾ, ಯಕ್ಷ ವಿಮರ್ಶಕ ಬೇಳೂರು ರಾಘವ ಶೆಟ್ಟಿ. ಯಕ್ಷ ಸಂಘಟಕ ಸುದರ್ಶನ ಉರಾಳ, ಹಂದೆ ದೇವಸ್ಥಾನದ ಆನುವಂಶಿಕ ಮೊಕ್ತೇಸರಾದ ಅಮರ ಹಂದೆ ಉಪಸ್ಥಿತಿಯಲ್ಲಿ ಮಕ್ಕಳ ಕ್ಷೇತ್ರದ ಯಕ್ಷ ಸಾಧಕ ಶ್ರೀಧರ ಹೆಬ್ಬಾರ್ ಕರ್ಜೆಯವರನ್ನು ಗೌರವಿಸಲಾಗುವುದು.
ಕೋಟ ಕಲಾ ಪೀಠ ಇವರಿಂದ ಬಡಗು ತಿಟ್ಟು ‘ಮೈಂದ ದ್ವಿವಿಧ ಕಾಳಗ’, ಯಕ್ಷ ಆರಾಧನಾ ಕಿದಿಯೂರು ಇವರಿಂದ ಬಡಗುತಿಟ್ಟು ‘ಶಶಿಪ್ರಭಾ ಪರಿಣಯ’, ಮಯೂರ ಪ್ರತಿಷ್ಠಾನ ಮಂಗಳೂರು ಇವರಿಂದ ತೆಂಕು ತಿಟ್ಟು ‘ಶರಣ ಸೇವಾ ರತ್ನ’ ಎಂಬ ಯಕ್ಷ ತ್ರಿವಳಿ ಪ್ರದರ್ಶನಗೊಳ್ಳಲಿದೆ ಎಂದು ಸಾಲಿಗ್ರಾಮ ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.