

ಡೈಲಿ ವಾರ್ತೆ: ಮಾ./06/2026

ಅನ್ನಭಾಗ್ಯದ 5 ಕೆಜಿ ಅಕ್ಕಿ ಬದಲು ಇನ್ನು ಮುಂದೆ ‘ಇಂದಿರಾ ಆಹಾರ ಕಿಟ್’: ಬಜೆಟ್‌ನಲ್ಲಿ ಸಿಎಂ ಭರ್ಜರಿ ಘೋಷಣೆ!

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಅನ್ನಭಾಗ್ಯ’ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.
ಇನ್ನು ಮುಂದೆ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ ಪೌಷ್ಟಿಕಾಂಶಯುಕ್ತ ‘ಇಂದಿರಾ ಆಹಾರ ಕಿಟ್’ ವಿತರಿಸಲು ಸರ್ಕಾರ ನಿರ್ಧರಿಸಿದೆ.
ಅಕ್ಕಿಯ ಬದಲಾಗಿ ಪ್ರತಿ ತಿಂಗಳು ತೊಗರಿಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆಯನ್ನು ಒಳಗೊಂಡ ಕಿಟ್ ನೀಡಲಾಗುತ್ತದೆ.
ಈ ಹೊಸ ಆಹಾರ ಕಿಟ್ ಯೋಜನೆಗಾಗಿ ಸರ್ಕಾರ ಪ್ರಸಕ್ತ ಸಾಲಿನಲ್ಲಿ 6,200 ಕೋಟಿ ರೂ. ಗಳನ್ನು ಮೀಸಲಿಟ್ಟಿದೆ.
ಕಳೆದ ಮೂರು ವರ್ಷಗಳಲ್ಲಿ ಅನ್ನಭಾಗ್ಯ ಯೋಜನೆಗಾಗಿ ಸರ್ಕಾರ ಒಟ್ಟು 17,167 ಕೋಟಿ ರೂ. ವೆಚ್ಚ ಮಾಡಿದ್ದು, 4.54 ಕೋಟಿ ಫಲಾನುಭವಿಗಳಿಗೆ ನೆರವಾಗಿದೆ ಎಂದು ಸಿಎಂ ವಿವರಿಸಿದರು.
ಆಹಾರ ಧಾನ್ಯ ವಿತರಣೆಯ ಸಗಟು ಮತ್ತು ಚಿಲ್ಲರೆ ಲಾಭಾಂಶ ಪಾವತಿಯಲ್ಲಿ ಆಗುತ್ತಿದ್ದ ವಿಳಂಬ ತಪ್ಪಿಸಲು, ಇನ್ನು ಮುಂದೆ ಲಾಭಾಂಶವನ್ನು ನೇರವಾಗಿ ಪಾವತಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು.
ರಾಜ್ಯದ 274 ಕಲ್ಯಾಣ ಸಂಸ್ಥೆಗಳ 32,059 ಫಲಾನುಭವಿಗಳಿಗೆ ಈಗಾಗಲೇ ಆಹಾರ ಭದ್ರತೆ ನೀಡಲಾಗುತ್ತಿದೆ. ಈ ವರ್ಷ ಹೊಸದಾಗಿ 34 ಕಲ್ಯಾಣ ಸಂಸ್ಥೆಗಳ 6,701 ಫಲಾನುಭವಿಗಳಿಗೆ ಈ ಯೋಜನೆಯನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ.
ಬಡವರ ಹಸಿವು ನೀಗಿಸುವುದರ ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ.