ಡೈಲಿ ವಾರ್ತೆ: ಮಾ./06/2026

ಕುರಿ ಶೆಡ್‌ಗೆ ಆಕಸ್ಮಿಕ ಬೆಂಕಿ; 700 ಕುರಿಗಳು ಜೀವಂತ ದಹನ, 2 ಕೋಟಿ ಹಾನಿ

​ಸಿಂಧನೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಮುಕ್ಕುಂದ ಗ್ರಾಮದ ಹೊರವಲಯದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 700ಕ್ಕೂ ಹೆಚ್ಚು ಕುರಿಗಳು ಜೀವಂತವಾಗಿ ಸುಟ್ಟು ಕರಕಲಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

​ಮುಕ್ಕುಂದ ಗ್ರಾಮದ ನಿವಾಸಿ ಹೇಮಲತಾ ಮಧುಸೂದನ್ ಎಂಬುವವರು ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹೈಟೆಕ್ ಕುರಿ ಶೆಡ್ ನಿರ್ಮಿಸಿದ್ದರು. ಕಳೆದ ಮೂರು ವರ್ಷಗಳಿಂದ ಇಲ್ಲಿ ಕುರಿ ಸಾಕಾಣಿಕೆ ಮಾಡಲಾಗುತ್ತಿತ್ತು. ನಿನ್ನೆ ರಾತ್ರಿ ಸುಮಾರು 2:30ರ ಸಮಯದಲ್ಲಿ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ.
​ಈ ವೇಳೆ ಶೆಡ್‌ನಲ್ಲಿದ್ದ 6 ಮಂದಿ ಕಾರ್ಮಿಕರು ಗಾಢ ನಿದ್ರೆಯಲ್ಲಿದ್ದ ಕಾರಣ, ಬೆಂಕಿ ವ್ಯಾಪಿಸಿದ ನಂತರವಷ್ಟೇ ವಿಷಯ ಬೆಳಕಿಗೆ ಬಂದಿದೆ. ತಕ್ಷಣವೇ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತಾದರೂ, ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗೆ ಇಡೀ ಶೆಡ್ ಆಹುತಿಯಾಗಿತ್ತು.

​ಸುಟ್ಟು ಹೋದ 700 ಕುರಿಗಳ ಪೈಕಿ 100ಕ್ಕೂ ಹೆಚ್ಚು ಕುರಿಗಳು ಸದ್ಯದಲ್ಲೇ ಮರಿ ಹಾಕುವ ಹಂತದಲ್ಲಿದ್ದವು. ಗರ್ಭದಲ್ಲಿದ್ದ ಮರಿಗಳೂ ಸಹ ತಾಯಿಯ ಜೊತೆಗೇ ಬೆಂಕಿಗೆ ಬಲಿಯಾಗಿರುವುದು ಸ್ಥಳೀಯರ ಕಣ್ಣಲ್ಲಿ ನೀರು ತರಿಸಿದೆ. ಸುಮಾರು 4 ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

​ಈ ಶೆಡ್ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ 47 ಲಕ್ಷ ರೂ. ಸಬ್ಸಿಡಿ ಪಡೆದಿದ್ದ ಹೇಮಲತಾ ಅವರು, ಉಳಿದ ಹಣವನ್ನು ಸಾಲದ ಮೂಲಕ ಹೊಂದಿಸಿದ್ದರು.
​”ಸುಮಾರು 2 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. 525 ಕುರಿಗಳಿಗೆ ಮಾತ್ರ ವಿಮೆ ಸೌಲಭ್ಯವಿದ್ದು, ಸರ್ಕಾರ ತಕ್ಷಣವೇ ಸ್ಪಂದಿಸಿ ನಮಗೆ ಸೂಕ್ತ ಪರಿಹಾರ ನೀಡಬೇಕು,” ಎಂದು ಮಾಲೀಕರ ಸಂಬಂಧಿ ಪದ್ಮಾನಾಯ್ಡು ಅಳಲು ತೋಡಿಕೊಂಡಿದ್ದಾರೆ.
​ಸದ್ಯ ಘಟನೆಗೆ ಸಂಬಂಧಿಸಿದಂತೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ತಗುಲಲು ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.