ಡೈಲಿ ವಾರ್ತೆ: 09/JUNE/2025

ಕುಂದಾಪುರ| ವಿವಾಹಿತ ಮಹಿಳೆ ನಾಪತ್ತೆ – ಸ್ಕೂಟರ್, ಚಪ್ಪಲಿ ಸೇತುವೆ ಮೇಲೆ ಪತ್ತೆ, ದೂರು ದಾಖಲು

ಕುಂದಾಪುರ| ವಿವಾಹಿತ ಮಹಿಳೆ ಯೋರ್ವರು ಜೂ. 9 ರಂದು ನಾಪತ್ತೆಯಾದ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಪತ್ತೆಯಾದ ಮಹಿಳೆ ಕುಂದಾಪುರ ವಿಠಲವಾಡಿ ಮೂಲದ ಹೀನಾ ಕೌಷರ್ (33) ಎಂದು ತಿಳಿದು ಬಂದಿದೆ.
ಇವರ ಪತಿ ವಿದೇಶದಲ್ಲಿದ್ದು ಎರಡು ಮಕ್ಕಳು ಹಾಗೂ ತಾಯಿಯೊಂದಿಗೆ ಕುಂದಾಪುರ ವಿಠಲವಾಡಿಯಲ್ಲಿ ವಾಸಿಸುತ್ತಿದ್ದರು.

ಸೋಮವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಕುಂದಾಪುರ ಚರ್ಚ್ ರೋಡ್ ಯಿಂದ ಕೋಡಿಗೆ ಹೋಗುವ ಸೇತುವೆ ಬಳಿ ಈಕೆಯ ಸ್ಕೂಟರ್ ಹಾಗೂ ಚಪ್ಪಲಿ ಪತ್ತೆ ಯಾಗಿದೆ.

ಪೊಲೀಸರು, ಅಗ್ನಿ ಶಾಮಕದಳ ಹಾಗೂ ಸ್ಥಳೀಯರು ಸೇರಿ ನದಿಯಲ್ಲಿ ಹುಡುಕಾಟ ನಡೆಸಿದ್ದು ಎಲ್ಲಿಯೂ ಪತ್ತೆ ಆಗಿರುವುದಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ.
ಇದರಿಂದಾಗಿ ಆತ್ಮಹತ್ಯೆಯೋ ಅಥವಾ ನಾಪತ್ತೆ ಯೋ ಎನ್ನುವ ಅನುಮಾನ ವ್ಯಕ್ತವಾಗಿದೆ..
ಕುಂದಾಪುರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಈ ನಡುವೆ ಪ್ರಕರಣಕ್ಕೆ ಬೇರೊಂದು ಆಯಾಮವೂ ಸೇರಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹೀನಾ ಕೌಷರ್ ಸ್ಕೂಟರ್ ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಎಂಬ ಸುದ್ದಿ ಹಬ್ಬಿದೆ. ಆದರೆ, ಕುಂದಾಪುರ ಪೊಲೀಸರು ಈ ಬಗ್ಗೆ ಸ್ಪಷ್ಟಪಡಿಸಿಲ್ಲ. ತನ್ನನ್ನು ಪತ್ತೆ ಮಾಡಹೊರಟವರ ದಾರಿ ತಪ್ಪಿಸುವ ಉದ್ದೇಶದಿಂದ ಈಕೆ ಡೆತ್ ನೋಟ್ ಬರೆದಿಟ್ಟು ನಾಟಕವಾಡಿರಬಹುದು ಎಂಬ ಸಂಶಯ ಪೊಲೀಸರನ್ನೂ ಕಾಡುತ್ತಿದೆ.

ಸ್ಕೂಟರ್ ಪತ್ತೆಯಾದ ಸ್ಥಳದಲ್ಲೇ ರಸ್ತೆಬದಿಗೆ ಸಿಸಿ ಟಿ. ವಿ. ಕ್ಯಾಮೆರಾ ಅಳವಡಿಸಲು ಹಾಕಿದ್ದ ಕಂಬ, ಬಾಕ್ಸ್ ಇದೆ. ಆದರೆ ಅದರೊಳಗೆ ಕ್ಯಾಮೆರಾ ಇಲ್ಲ. ಇದು ಸಂಬಂಧಿತರ ನಿರ್ಲಕ್ಷ್ಯವನ್ನು ತೋರಿಸುತ್ತಿದೆ.