ಡೈಲಿ ವಾರ್ತೆ: 12/JUNE/2025

ಏರ್​ ಇಂಡಿಯಾ ವಿಮಾನ ದುರಂತದಲ್ಲಿ ಪವಾಡ ಸದೃಶ ರೀತಿಯಲ್ಲಿ ಓರ್ವ ಪ್ರಯಾಣಿಕ ಬಚಾವ್!

ಅಹಮದಾಬಾದ್: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 242 ಪ್ರಯಾಣಿಕರ ಪೈಕಿ ಓರ್ವ ಪವಾಡಸದೃಶವಾಗಿ ಸಾವಿನ ದವಡೆಯಿಂದ ಪಾರಾಗಿರುವ ಮಾಹಿತಿ ಲಭ್ಯವಾಗಿದೆ.

ಅಹಮದಾಬಾದ್​ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿ ನಗರದಲ್ಲಿರುವ ಬಿಜೆ ಮೆಡಿಕಲ್​ ಕಾಲೇಜಿನ ಹಾಸ್ಟೆಲ್​ ಕಟ್ಟಡದ ಮೇಲೆ ಏಕಾಏಕಿ ಪತನಗೊಂಡಿದ್ದು, ದುರಂತಕ್ಕೀಡಾದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೈಕಿ ಓರ್ವ ಪವಾಡಸದೃಶವಾಗಿ ಸಾವಿನ ದವಡೆಯಿಂದ ಪಾರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್.ಮಲಿಕ್ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, “ಸೀಟ್​ ನಂಬರ್​ 11A ನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಸಾವಿನ ದವಡೆಯಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಸಾವಿನ ಸಂಖ್ಯೆಯ ಬಗ್ಗೆ ಸದ್ಯಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ. ವಿಮಾನವು ವಸತಿ ಪ್ರದೇಶದಲ್ಲಿ ಅಪಘಾತಕ್ಕೀಡಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು” ಎಂದು ಹೇಳಿದ್ದಾರೆ.

ಪವಾಡಸದೃಶವಾಗಿ ಬದುಕುಳಿದ ಪ್ರಯಾಣಿಕರನ್ನು ಬ್ರಿಟಿಷ್ ಪ್ರಜೆ ವಿಶ್ವಸ್‌ಕುಮಾರ್ ರಮೇಶ್ ಎಂದು ಗುರುತಿಸಲಾಗಿದೆ. ಮುಖ ಮತ್ತು ಇತರಡೆ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯಗಳು ಕಂಡು ಬಂದಿವೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.