



ಡೈಲಿ ವಾರ್ತೆ: 13/JUNE/2025


ಉಳ್ಳಾಲ| ಬಹುಮಹಡಿ ವಸತಿ ಸಂಕೀರ್ಣದ 12ನೇ ಮಹಡಿಯಿಂದ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೃತ್ಯು

ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರ್ ನಲ್ಲಿರುವ ಸಿಲಿಕೋನಿಯಾ ವಸತಿ ಸಂಕೀರ್ಣದ 12 ನೇ ಮಹಡಿಯಿಂದ ಬಿದ್ದು ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜೂ.12ರ ಗುರುವಾರ ತಡರಾತ್ರಿ ಸಂಭವಿಸಿದೆ.
ಯೆನೆಪೋಯ ವೈದ್ಯಕೀಯ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ವೈದ್ಯ ದಂಪತಿ ಡಾ. ಮಮ್ತಾಝ್ ಅಹ್ಮದ್ ಮತ್ತು ಡಾ. ಕಮ್ರಾಜ್ ದಂಪತಿ ಪುತ್ರಿ ಹಿಬಾ ಐಮನ್ (15) ಸಾವನ್ನಪ್ಪಿರುವ ಬಾಲಕಿ.
18ನೇ ಮಹಡಿ ಹೊಂದಿರುವ ಸಿಲಿಕೋನಿಯಾ ವಸತಿ ಸಂಕೀರ್ಣದ 12 ಮಹಡಿಯಲ್ಲಿ ವೈದ್ಯ ದಂಪತಿ ವಾಸವಿದ್ದರು. ರಾತ್ರಿ ವೈದ್ಯ ದಂಪತಿಗಳಿಬ್ಬರು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯಲ್ಲಿ ಕಾರ್ಯನಿರ್ವಹಿಸುತಿದ್ದು, ಹಿಬಾ ಬಾಲ್ಕನಿಯಲ್ಲಿ ಸ್ಟೂಲ್ ಇಟ್ಟು ಬೆಡ್ ಶೀಟ್ ಒಣಗಿಸಲು ಯತ್ನಿಸುತ್ತಿದ್ದಾಗ ಮೇಲಿಂದ ಕೆಳ ಬಿದ್ದು ಸಾವನ್ನಪ್ಪಿದ್ದಾಳೆ.
ಯೆನೆಪೋಯ ಶಾಲೆಯಲ್ಲಿ 10ನೇ ತರಗತಿಯಲ್ಲಿ ಹಿಬಾ ವಿದ್ಯಾರ್ಥಿನಿಯಾಗಿದ್ದಳು. ತಂದೆ, ತಾಯಿ, ಸಹೋದರನನ್ನು ಅಗಲಿದ್ದಾಳೆ. ಉಳ್ಳಾಲ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.