



ಡೈಲಿ ವಾರ್ತೆ: 13/JUNE/2025


ವಿಮಾನ ದುರಂತ ಸ್ಥಳಕ್ಕೆ ಪ್ರಧಾನಿ ಭೇಟಿ: ಅಹಮದಾಬಾದ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಮೋದಿ

ಗುಜರಾತ್: ಏರ್ ಇಂಡಿಯಾ ವಿಮಾನ ಪತನಗೊಂಡು 241 ಮಂದಿ ಸಾವನ್ನಪ್ಪಿರುವ ದುರಂತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ.
ಇಂದು ಬೆಳಗ್ಗೆ ಪ್ರಧಾನಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿಂದ ಮೇಘನಿನಗರ ಪ್ರದೇಶದಲ್ಲಿ ಸಂಭವಿಸಿದ ಅಪಘಾತ ಸ್ಥಳಕ್ಕೆ ನೇರವಾಗಿ ಕಾರಿನಲ್ಲೇ ತೆರಳಿದರು. ಇಲ್ಲಿ ಅಧಿಕಾರಿಗಳ ಬಳಿ ಘಟನೆ ಬಗ್ಗೆ ಮಾಹಿತಿ ಪಡೆದ ಮೋದಿ ಬಳಿಕ ಅಹಮದಾಬಾದ್ನ ಸಾರ್ವಜನಿಕ ಆಸ್ಪತ್ರೆಗೆ ತೆರಳಿದರು. ಅಲ್ಲಿ ವಿಮಾನ ದುರಂತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಅಲ್ಲಿಂದ ಏರ್ಪೋರ್ಟ್ನತ್ತ ತೆರಳಿದರು.
ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಪು, ಕೇಂದ್ರ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಮತ್ತು ರಾಜ್ಯ ಗೃಹ ಸಚಿವ ಹರ್ಷ ಸಾಂಘವಿ, ಇತರ ಭದ್ರತಾ ಅಧಿಕಾರಿಗಳು ಜೊತೆಗಿದ್ದರು.
ಇನ್ನೂ ದುರಂತದ ಬಗ್ಗೆ ನಿನ್ನೆ ಎಕ್ಸ್ ಪೋಸ್ಟ್ ಮೂಲಕ ಸಂತಾಪ ಸೂಚಿಸಿದ್ದ ಪ್ರಧಾನಿ ಮೋದಿ, ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ದುರಂತದಿಂದ ದಿಗ್ಭ್ರಮೆಗೊಂಡಿದ್ದೇನೆ. ಇದರಿಂದ ಎಲ್ಲರಿಗೂ ಅತೀವ ನೋವು ಉಂಟಾಗಿದೆ. ದುರಂತದಲ್ಲಿ ಸಿಲುಕಿರುವವರಿಗೆ ನೆರವು ನೀಡುವ ವಿಚಾರವಾಗಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅಲ್ಲದೇ ನಿರಂತರವಾಗಿ ಅವರ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದರು.
ಏನಿದು ದುರಂತ.?
ಅಹಮದಾಬಾದ್ ನಿಂದ ಗುರುವಾರ ಲಂಡನ್ಗೆ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನವು ಅಹಮದಾಬಾದ್ನ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿ ದುರಂತ ಸಂಭವಿಸಿದೆ. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ಪತನಗೊಂಡು ಬೆಂಕಿ ಹೊತ್ತಿಕೊಂಡಿದ್ದು, ಕನಿಷ್ಠ 265 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸಂಭವಿಸಿದ ಅತ್ಯಂತ ಭೀಕರ ವಾಯು ದುರಂತ ಇದಾಗಿದೆ.

ಬೋಯಿಂಗ್ 787 ಡ್ರೀಮ್ಲೈನರ್ (AI 171) ವಿಮಾನ ದುರಂತದಲ್ಲಿ ವಿಶ್ವಶ್ ಕುಮಾರ್ ರಮೇಶ್ ಎಂಬ ಏಕೈಕ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನುಳಿದಂತೆ ವಿಮಾನದಲ್ಲಿದ್ದ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಗೂ ಸಿಬ್ಬಂದಿ ಸೇರಿದಂತೆ 241 ಮಂದಿ ಅಸುನೀಗಿದ್ದಾರೆ.

ಮಾಹಿತಿ ಪ್ರಕಾರ 265 ಶವಗಳನ್ನು ಸಿಟಿ ಸಿವಿಲ್ ಆಸ್ಪತ್ರೆಗೆ ತರಲಾಗಿದೆ” ಎಂದು ಪೊಲೀಸ್ ಉಪ ಆಯುಕ್ತ ಕಾನನ್ ದೇಸಾಯಿ ತಿಳಿಸಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದ ಹೊರಗಿರುವ ನಗರದ ನಾಗರಿಕ ಆಸ್ಪತ್ರೆ ಮತ್ತು ಬಿಜೆ ವೈದ್ಯಕೀಯ ಕಾಲೇಜಿನ ಮೇಲೆ ವಿಮಾನವು ಅಪ್ಪಳಿಸಿದೆ. ಹಲವಾರು ಶವಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ ಎಂದು ವರದಿಯಾಗಿದೆ.

ಮೃತರಲ್ಲಿ ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು ಮತ್ತು ವೈದ್ಯರ ಪತ್ನಿಯರು ಸೇರಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಹುಮಹಡಿ ಹಾಸ್ಟೆಲ್ ಕಟ್ಟಡದಲ್ಲಿ ಊಟದ ಸಮಯದಲ್ಲೇ ವಿಮಾನವು ಊಟದ ಹಾಲ್ಗೆ ಡಿಕ್ಕಿ ಹೊಡೆದ ಪರಿಣಾಮ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.


ಏರ್ ಇಂಡಿಯಾ ಮಾಹಿತಿ ಪ್ರಕಾರ, 230 ಪ್ರಯಾಣಿಕರಲ್ಲಿ 169 ಭಾರತೀಯರು, 53 ಬ್ರಿಟಿಷ್, ಏಳು ಪೋರ್ಚುಗೀಸ್ ಮತ್ತು ಒಬ್ಬ ಕೆನಡಿಯನ್ ಇದ್ದರು. ಜೊತೆಗೆ, ಇಬ್ಬರು ಪೈಲಟ್ಗಳು ಮತ್ತು 10 ಸಿಬ್ಬಂದಿ ಸೇರಿ ಇತರ 12 ಮಂದಿ ವಿಮಾನದಲ್ಲಿದ್ದರು. 11A ಸೀಟ್ನಲ್ಲಿ ಕುಳಿತಿದ್ದ ವಿಶ್ವಶ್ ಕುಮಾರ್ ರಮೇಶ್, ಪವಾಡಸದೃಶವಾಗಿ ಪಾರಾಗಿದ್ದಾರೆ.