ಡೈಲಿ ವಾರ್ತೆ: 27/ಅ./2025

ಪೊಲೀಸರಿಗೆ ಸ್ಲೋಚ್ ಹ್ಯಾಟ್ ಬದಲು ‘ಪೀಕ್ ಕ್ಯಾಪ್’, ಅ.28 ರಿಂದಲೇ ಹೊಸ ಟೋಪಿ

ಬೆಂಗಳೂರು: ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ಗಳು ಧರಿಸುತ್ತಿರುವ ಹಳೆ ಶೈಲಿಯ ಬ್ರಿಟಿಷ್​ ಕಾಲದ ಟೋಪಿ ಬದಲಾವಣೆಯ ಕಾಲ ಅಂತೂ ಸನ್ನಿಹಿತವಾಗಿದೆ. ಕಾನ್ಸ್‌ಟೇಬಲ್‌ಗಳು ಈಗ ಧರಿಸುತ್ತಿರುವ ಸ್ಲೋಚ್ ಹ್ಯಾಟ್ ಬದಲು ಪೀಕ್ ಕ್ಯಾಪ್ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಅಕ್ಟೋಬರ್‌ 28ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾನ್ಸ್‌ಟೇಬಲ್‌ಗಳಿಗೆ ಪೀಕ್ ಕ್ಯಾಪ್ ವಿತರಣೆ ಮಾಡಲಿದ್ದಾರೆ.

ಹಳೆಯ ಮಾದರಿಯ ಟೋಪಿ ಬದಲಿಸುವಂತೆ ಹಲವು ವರ್ಷಗಳಿಂದಲೂ ರಾಜ್ಯದ ಪೊಲೀಸ್ ಸಿಬ್ಬಂದಿ ಬೇಡಿಕೆಯಿಡುತ್ತಲೇ ಬಂದಿದ್ದರಾದರೂ ಬೇಡಿಕೆ ಈಡೇರಿರಲಿಲ್ಲ. ಸ್ಲೋಚ್ ಹ್ಯಾಟ್ ಬದಲಿಗೆ ಪೀಕ್​ ಕ್ಯಾಪ್​ ನೀಡುವುದರ ಕುರಿತು ರಚಿಸಲಾಗಿದ್ದ ಪೊಲೀಸ್ ಕಿಟ್ ನಿರ್ದಿಷ್ಟತಾ ಸಮಿತಿಯ ಸದಸ್ಯರು ಹಲವು ಬಾರಿ ಸಭೆ ಸೇರಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಇತ್ತೀಚಿಗೆ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಭೆಯ ಬಳಿಕ ದೆಹಲಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ಗಳು ಬಳಸುತ್ತಿರುವ ಕ್ಯಾಪ್‌ಗಳನ್ನು ಗೃಹ ಸಚಿವ ಡಾ ಜಿ.ಪರಮೇಶ್ವರ್ ಅವರು ಪರಿಶೀಲನೆ ನಡೆಸಿದ್ದರು.

ಸ್ಲೋಚ್ ಕ್ಯಾಪ್ ಇತಿಹಾಸ, ಬದಲಾವಣೆ: ರಾಜ್ಯದಲ್ಲಿ ಪೊಲೀಸ್ ಕ್ಯಾಪ್‌ಗಳಿಗೆ ಶತಮಾನದ ಇತಿಹಾಸವಿದೆ. ಮೈಸೂರು ಮಹಾರಾಜರ ಅವಧಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಕಿ ಅಂಗಿ, ಅರ್ಧ ಪ್ಯಾಂಟ್, ಬಣ್ಣದ ಪೇಟ ಮತ್ತು ಕಂದು ಬಣ್ಣದ ಬೂಟುಗಳನ್ನ ಧರಿಸಲಾಗುತ್ತಿತ್ತು. ರಾಜಪ್ರಭುತ್ವ ಅಂತ್ಯವಾದ ಬಳಿಕವೂ ಪೊಲೀಸರ ಸಾಂಪ್ರದಾಯಿಕ ಶೈಲಿಯ ಉಡುಗೆ ಉಳಿಸಿಕೊಳ್ಳಲಾಯಿತು. ನಂತರದ ದಿನಗಳಲ್ಲಿ ಅರ್ಧ ಪ್ಯಾಂಟ್ ಬದಲು ಪೂರ್ಣ ಪ್ರಮಾಣದ ಪ್ಯಾಂಟ್ ಹಾಗೂ ನೀಲಿ ಮತ್ತು ಕೆಂಪು ಬಣ್ಣಗಳುಳ್ಳ ಟರ್ಬನ್ ಮಾದರಿಯ ಕ್ಯಾಪ್ ಪರಿಚಯಿಸಲಾಯಿತು. ಆದರೆ, ರಾಜ್ಯ ಪೊಲೀಸ್ ಕಾನ್ಸ್‌ಟೇಬಲ್‌ಗಳು ಪ್ರಸ್ತುತ ಬಳಸುತ್ತಿರುವ ಸ್ಲೋಚ್ ಕ್ಯಾಪ್‌ಗಳನ್ನು ಆರ್.ಗುಂಡೂರಾವ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿ (1980-83)ಯಲ್ಲಿ ಪರಿಚಯಿಸಲಾಗಿತ್ತು. ಅಲ್ಲಿಯವರೆಗೂ ಇದ್ದ ನೀಲಿ ಬಣ್ಣದ ಕೆಂಪು ಪಟ್ಟಿಗಳಿದ್ದ ಟರ್ಬನ್‌ಗಳ ಬದಲಿಗೆ ಸ್ಲೋಚ್ ಕ್ಯಾಪ್‌ಗಳನ್ನ ದೈನಂದಿನ ಕರ್ತವ್ಯದ ಸಂದರ್ಭಗಳಿಗಾಗಿ ಪರಿಚಯಿಸಲಾಗಿತ್ತು. ಸದ್ಯ ಪರೇಡ್ ಮತ್ತಿತರ ಸಂದರ್ಭಗಳಲ್ಲಿ ಮಾತ್ರವೇ ಟರ್ಬನ್‌ಗಳನ್ನ ಬಳಸಲಾಗುತ್ತಿದೆ.

ಕಾನ್ಸ್‌ಟೇಬಲ್‌ಗಳ ಕ್ಯಾಪ್ ಬದಲಾವಣೆಯ ಕುರಿತ 2018ರಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿತ್ತು. ಆದರೆ, ಅದಾಗಲೇ ಲಕ್ಷಾಂತರ ಸ್ಲೋಚ್ ಹ್ಯಾಟ್‌ಗಳು ಹೊಸದಾಗಿ ಸಿದ್ಧವಾಗಿದ್ದರಿಂದ ಅಧಿಕಾರಿಗಳ ಮಟ್ಟದಲ್ಲಿ ಪೀಕ್ ಕ್ಯಾಪ್ ವಿತರಣೆಗೆ ಒಮ್ಮತದ ಅಭಿಪ್ರಾಯ ಮೂಡಿರಲಿಲ್ಲ. ನಂತರದ ವರ್ಷಗಳಲ್ಲಿ ಹಲವು ಬಾರಿ ಸಭೆ ಸೇರಿದ್ದ ಪೊಲೀಸ್ ಕಿಟ್ ನಿರ್ದಿಷ್ಟತಾ ಸಮಿತಿಯ ಸದಸ್ಯರು ಸ್ಲೋಚ್ ಹ್ಯಾಟ್‌ಗೂ ಪೀಕ್ ಕ್ಯಾಪ್‌ಗೂ ಇರುವ ವ್ಯತ್ಯಾಸ, ಪೀಕ್ ಕ್ಯಾಪ್ ಬಳಕೆಯಲ್ಲಿರುವ ರಾಜ್ಯಗಳ ಪೊಲೀಸರ ಅಭಿಪ್ರಾಯ, ಪೀಕ್ ಕ್ಯಾಪ್ ವಿತರಣೆಯಿಂದ ಕರ್ತವ್ಯ ನಿರ್ವಹಣೆಗೆ ಹೇಗೆ ಉಪಯೋಗ ಎಂಬುದರ ಕುರಿತು ಚರ್ಚಿಸಿದ್ದರು.

ಸ್ಲೋಚ್ ಹ್ಯಾಟ್ ಬದಲಾವಣೆಗೆ ಕಾರಣಗಳು: ಸ್ಲೋಚ್ ಹ್ಯಾಟ್‌ನ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿತ್ತು. ಸ್ಲೋಚ್ ಹ್ಯಾಟ್ ಬಳಕೆಯಿಂದ ಕುತ್ತಿಗೆ ಅಸ್ವಾಭಾವಿಕವಾಗಿ ಮುಂದಕ್ಕೆ ಬಾಗುವಿಕೆ, ಭುಜ, ಕುತ್ತಿಗೆ ಮತ್ತು ಬೆನ್ನಿನ ಕೆಳಭಾಗದಲ್ಲಿ ನೋವುಂಟಾಗುವ ಅಪಾಯಗಳ ಕುರಿತು ಆರೋಗ್ಯ ಇಲಾಖೆ ಬೆಳಕು ಚೆಲ್ಲಿತ್ತು. ಅಲ್ಲದೇ ಪ್ರತಿಭಟನೆ, ರ್‍ಯಾಲಿ, ಅಪರಾಧಿಗಳನ್ನ ಬೆನ್ನತ್ತುವ ಸಂದರ್ಭಗಳಲ್ಲಿ ಸ್ಲೋಚ್ ಹ್ಯಾಟ್ ಧರಿಸಿ ಕರ್ತವ್ಯ ನಿರ್ವಹಿಸುವುದು ಕಿರಿಕಿರಿ ಉಂಟುಮಾಡುತ್ತಿದೆ. ಹ್ಯಾಟ್ ನೆಲಕ್ಕೆ ಬಿದ್ದರೆ ಇಲಾಖೆಯ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಆದ್ದರಿಂದ ಹಳೆ ಮಾದರಿಯ ಹ್ಯಾಟ್ ಬದಲು ತಲೆಯ ಮೇಲೆ ಗಟ್ಟಿಯಾಗಿ ನಿಲ್ಲುವಂಥಹ ಎಲಾಸ್ಟಿಕ್ ಮಾದರಿಯ ಕ್ಯಾಪ್‌ಗಳನ್ನು ನೀಡಿದರೆ ಉತ್ತಮವೆಂದು ಪೊಲೀಸ್ ಸಿಬ್ಬಂದಿ ಬಹುದಿನಗಳಿಂದಲೂ ಬೇಡಿಕೆಯಿಡುತ್ತಿದ್ದರು.

ಪ್ರತಿಭಟನೆ, ರ್‍ಯಾಲಿ, ಅಪರಾಧಿಗಳನ್ನ ಬೆನ್ನಟ್ಟುವ ಸಂದರ್ಭಗಳಲ್ಲಿ ಹ್ಯಾಟ್ ಬೀಳುವ ಆತಂಕ ಒಂದೆಡೆಯಾದರೆ, ಹಳೆಯ ವಿನ್ಯಾಸವು ಸಮಕಾಲೀನ ಪೊಲೀಸ್ ಸಮವಸ್ತ್ರದ ಸೌಂದರ್ಯಕ್ಕೆ ಹೊಂದಿಕೆಯಾಗದಿರುವುದರಿಂದ ಆಗಾಗ ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತಿತ್ತು. ಅಂತಿಮವಾಗಿ ಹ್ಯಾಟ್ ಬದಲಾವಣೆಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಎಂದು ಪೊಲೀಸ್ ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದರು.