ಡೈಲಿ ವಾರ್ತೆ: 27/ಅ./2025

ಟೊಮೆಟೊ ಬಿಡಿಸಲು ಹೋಗಿದ್ದ ರೈತ ಹುಲಿ ದಾಳಿಯಿಂದ ಸಾವು

ಮೈಸೂರು: ಹುಲಿ ದಾಳಿಗೆ ರೈತನೋರ್ವ ಬಲಿಯಾಗಿರುವ ಘಟನೆ ನಂಜನಗೂಡು ತಾಲೂಕಿನ ಹೆಡಿಯಾಲ ಹೋಬಳಿಯ ಮುಳ್ಳೂರುಹುಂಡಿ-ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ನಡೆದಿದೆ.

ಬೆಣ್ಣೆಗೆರೆ ಗ್ರಾಮದ ರಾಜಶೇಖರ್ (55) ಹುಲಿ ದಾಳಿಗೆ ಬಲಿಯಾದ ರೈತ. ರಾಜಶೇಖರ್ ಹಾಗೂ ಸಿದ್ದರಾಮೇಗೌಡ (50) ಇವರಿಬ್ಬರು ಬೆಣ್ಣೆಗೆರೆ ಗ್ರಾಮದ ಬೇರೆಯವರ ಜಮೀನಿನಲ್ಲಿ ಟೊಮೆಟೊ ಬಿಡಿಸಲು ಹೋಗಿದ್ದರು. ಟೊಮೆಟೊ ಬಿಡಿಸಿ ನಂತರ ಊಟಕ್ಕೆ ಮನೆಗೆ ಹೋಗುವಾಗ, ಪೊದೆಯಲ್ಲಿ ಅವತ್ತಿದ್ದ ಹುಲಿ ಇಬ್ಬರ ಮೇಲೆ ಎರುಗಿದೆ. ಈ ವೇಳೆಯಲ್ಲಿ ಸಿದ್ದರಾಮೇಗೌಡ ಜೋರಾಗಿ ಕಿರುಚಿಕೊಂಡು ಸಮೀಪ ದೂರಕ್ಕೆ ಓಡಿಹೋದರೆ, ರಾಜಶೇಖರ್ ಹುಲಿಗೆ ದಾಳಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಶಾಸಕ ಅನಿಲ್ ಚಿಕ್ಕಮಾದು ಸ್ಥಳಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಪರಿಹಾರವನ್ನು ಕೊಡಿಸುವುದಾಗಿ ಭರವಸೆ ನೀಡಿ ತೆರಳಿದರು.