

ಡೈಲಿ ವಾರ್ತೆ: 27//DEC/2025


ಭಟ್ಕಳ| ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದನಗಳಿಂದ ಸರಣಿ ಅಪಘಾತ

ಭಟ್ಕಳ: ಹಸುವೊಂದು ಹಠಾತ್ತನೆ ರಸ್ತೆ ದಾಟಿದ್ದರಿಂದ ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ನಡೆದ ಘಟನೆ ಭಟ್ಕಳ ನಗರದ ಶೆಟ್ಟಿ ಗ್ಯಾರೇಜ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಹಸುವೊಂದು ರಸ್ತೆ ದಾಟಿದ್ದರಿಂದ ನಾಲ್ಕು ವಾಹನಗಳು ಒಂದರ ನಂತರ ಒಂದರಂತೆ ಡಿಕ್ಕಿ ಹೊಡೆದು ಕೊನೆಗೆ ರಸ್ತೆ ಬದಿಯ ಇಳಿಜಾರಿಗೆ ಬಿದ್ದವು.
ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಕೇರಳದಿಂದ ಮಹಾರಾಷ್ಟ್ರದ ಕಡೆಗೆ ತೆರಳುತ್ತಿದ್ದ ಕಾರಿನ ಮುಂದೆ ಏಕಾಏಕಿ ಹಸು ಕಾಣಿಸಿಕೊಂಡಿದೆ. ಅಪಘಾತ ತಪ್ಪಿಸಲು ಚಾಲಕ ತುರ್ತುವಾಗಿ ವಾಹನ ತಿರುಗಿಸಿದ ಪರಿಣಾಮ ನಿಯಂತ್ರಣ ತಪ್ಪಿ ಕಾರು ಮೊದಲು ಸರಕು ಸಾಗಣೆ ಆಟೋ ರಿಕ್ಷಾಗೆ ಡಿಕ್ಕಿಯಾಯಿತು. ನಂತರ ಅಲ್ಲಿದ್ದ ಹೊಸ ಬೊಲೆರೊ ಪಿಕ್‌ಅಪ್ ವಾಹನ ಹಾಗೂ ದುರಸ್ತಿ ಮುಗಿಸಿ ಗ್ಯಾರೇಜ್‌ನಿಂದ ಹೊರಬರುತ್ತಿದ್ದ ಇನ್ನೊಂದು ಪಿಕ್‌ಅಪ್ ವ್ಯಾನ್‌ಗೆ ಕ್ರಮವಾಗಿ ಡಿಕ್ಕಿ ಹೊಡೆದಿದೆ. ಕೊನೆಯಲ್ಲಿ ರಸ್ತೆ ಬದಿಯ ವೇಗ ಸೂಚನಾ ಫಲಕದ ಕಂಬಕ್ಕೂ ಕಾರು ಢಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಯಿಂದಾಗಿ ಎಲ್ಲ ವಾಹನಗಳು ರಸ್ತೆ ಕೆಳಗಿನ ಇಳಿಜಾರಿನೊಳಗೆ ಜಾರಿಬಿದ್ದವು. ಅಪಘಾತಕ್ಕೆ ಕಾರಣವಾದ ಹಸು ಯಾವುದೇ ಗಾಯವಿಲ್ಲದೆ ಅಲ್ಲಿಂದ ಸುರಕ್ಷಿತವಾಗಿ ತೆರಳಿದುದು ಸ್ಥಳೀಯರಲ್ಲಿ ಅಚ್ಚರಿಯ ಪ್ರತಿಕ್ರಿಯೆ ಮೂಡಿಸಿದೆ.
ಕಾರಿನಲ್ಲಿ ಕೇರಳ ಮೂಲದ ದಂಪತಿ ಹಾಗೂ ಅವರ ಮೂವರು ಮಕ್ಕಳು ಪ್ರಯಾಣಿಸುತ್ತಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಆದರೆ ಸರಕು ಸಾಗಣೆ ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ನಂತರ ಕ್ರೇನ್ ಸಹಾಯದಿಂದ ವಾಹನಗಳನ್ನು ಮೇಲಕ್ಕೆ ಎತ್ತುವ ಕಾರ್ಯ ನಡೆದಿದ್ದು, ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.