ಡೈಲಿ ವಾರ್ತೆ: 27/DEC/2025

ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಮತ್ತೋರ್ವ ಗಾಯಾಳು‌ ಮಹಿಳೆ ಸಾವು – ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು: ನಗರದ ಅಂಬಾವಿಲಾಸ ಅರಮನೆ ಬಳಿ ಉಂಟಾದ ಹೀಲಿಯಂ ಸಿಲಿಂಡರ್ ಸ್ಫೋಟದ ವೇಳೆ ಗಾಯಗೊಂಡಿದ್ದ ಮತ್ತೋರ್ವ ಮಹಿಳೆ ಲಕ್ಷ್ಮಿ ಕೂಡ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಬಲೂನ್‌ ಮಾರಾಟ ಮಾಡುತ್ತಿದ್ದ ವೇಳೆ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಸಂಭವಿಸಿದ ಸ್ಫೋಟದಿಂದ ಗಾಯಗೊಂಡಿದ್ದ ಲಕ್ಷ್ಮಿ ಅವರನ್ನ ಕೆ.ಆರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಂಗಳೂರು ಮೂಲದ ಲಕ್ಷ್ಮಿ ಅವರು ಕುಟುಂಬದ ಜೊತೆ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದರು. ಇದೀಗ ಸ್ಫೋಟದಲ್ಲಿ ದುರಂತ ಸಾವಿಗೀಡಾಗಿದ್ದಾರೆ.

ಅರಮನೆ ಮುಂಭಾಗ ಆಗಿದ್ದೇನು?
ಮೈಸೂರು ಅರಮನೆ ಬಳಿ ರಾತ್ರಿ ಸಂಭವಿಸಿದ್ದ ಹೀಲಿಯಂ ಸಿಲಿಂಡರ್ ಸ್ಫೋಟದಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿದೆ. ತೀವ್ರವಾಗಿ ಗಾಯಗೊಂಡಿದ್ದ ನಂಜನಗೂಡಿನ ಮಂಜುಳಾ, ಬೆಂಗಳೂರು ಮೂಲದ ಲಕ್ಷ್ಮಿ ಕೆ.ಆರ್ ಆಸ್ಪತ್ರೆಯ ಐಸಿಯುನಲ್ಲಿ ಸಾವನ್ನಪ್ಪಿದ್ದಾರೆ.

ಗುರುವಾರ ಸ್ಫೋಟದ ತೀವ್ರತೆಗೆ ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಬಲೂನ್ ಮಾರುತ್ತಿದ್ದ ಸಲೀಂ (40) ಮೃತಪಟ್ಟಿದ್ದು, ಮೃತದೇಹ ಛಿದ್ರ-ಛಿದ್ರವಾಗಿದೆ. ಆರಂಭದಲ್ಲಿ ಮೃತ ಸಲೀಂ ಕೋಲ್ಕತ್ತಾದ ಮೂಲದವನು ಎನ್ನಲಾಗಿತ್ತು. ಆದರೆ, ಈಗ ಉತ್ತರ ಪ್ರದೇಶ ಮೂಲದವನು ಎಂಬ ಮಾಹಿತಿ ಲಭ್ಯವಾಗಿದೆ.

ಉತ್ತರ ಪ್ರದೇಶದಿಂದ ಸಹೋದರರ ಜೊತೆ ಮೈಸೂರಿಗೆ ಆಗಮಿಸಿದ ಈತ ಕಳೆದ 15 ದಿನಗಳಿಂದ ಲಷ್ಕರ್ ಮೊಹಲ್ಲಾದ ಷರೀಫ್ ಲಾಡ್ಜ್‌ನಲ್ಲಿ ವಾಸವಾಗಿದ್ದ. ಸಲೀಂ ಜೊತೆ ವಾಸವಿದ್ದ ಇಬ್ಬರನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸಲೀಂ ಜೊತೆ ಈ ಇಬ್ಬರು ದಿನವೂ ಬಲೂನ್ ಮಾರಾಟಕ್ಕೆ ಹೋಗುತ್ತಿದ್ದರು. ಆದರೆ, ನಿನ್ನೆ ರೂಂನಲ್ಲಿಯೇ ಇದ್ದರು. ಅರಮನೆಯೊಳಗೆ ಹೋಗಿ ಸಲೀಂ ಫೋಟೋ ತೆಗೆಸಿಕೊಂಡಿದ್ದ. ಅರಮನೆಯೊಳಗೆ ಸಲೀಂ ಯಾವಾಗ ಹೋದ..? ಅರಮನೆ ಒಳಗೆ ಸಲೀಂ ಹೋಗಿದ್ದು ಯಾಕೆ..? ಎನ್ನುವ ಬಗ್ಗೆ ಕುತೂಹಲ ಮೂಡಿದೆ. ಪ್ರಕರಣಕ್ಕೆ ಈಗ ರಾಷ್ಟ್ರೀಯ ತನಿಖಾ ದಳ ಎಂಟ್ರಿಯಾಗಿದೆ. ಎನ್‌ಐಎ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಪೊಲೀಸರ ಜೊತೆ ತನಿಖೆಯ ಮಾಹಿತಿ ಪಡೆದಿದ್ದಾರೆ. ಅರಮನೆಯ ಆವರಣದಲ್ಲೇ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಹಲವಾರು ಅನುಮಾನಗಳು ಈಗ ವ್ಯಕ್ತವಾಗಿದೆ.