ಡೈಲಿ ವಾರ್ತೆ: ಮಾ./02/2026

ಸೌದಿ| ವಿಶ್ವದ ಅತಿ ದೊಡ್ಡ ತೈಲ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸಂಚಲನ

​ರಿಯಾದ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕವಿಯುತ್ತಿದ್ದು, ಸೌದಿ ಅರೇಬಿಯಾದ ಸರ್ಕಾರಿ ಸ್ವಾಮ್ಯದ ದೈತ್ಯ ತೈಲ ಕಂಪನಿ ಸೌದಿ ಅರಾಮ್ಕೊ ಮೇಲೆ ಇರಾನ್ ಭೀಕರ ಡ್ರೋನ್ ದಾಳಿ ನಡೆಸಿದೆ. ಘಟನೆಯ ಬೆನ್ನಲ್ಲೇ ಸುರಕ್ಷತಾ ದೃಷ್ಟಿಯಿಂದ ಸೌದಿ ಅರೇಬಿಯಾ ತನ್ನ ಪ್ರಮುಖ ತೈಲ ಸಂಸ್ಕರಣಾಗಾರವಾದ ರಾಸ್ ತನುರಾ ಘಟಕವನ್ನು ಸ್ಥಗಿತಗೊಳಿಸಿದೆ.

​ಗಲ್ಫ್ ಪ್ರದೇಶದ ಅತಿದೊಡ್ಡ ತೈಲ ಸಂಸ್ಕರಣಾ ಕೇಂದ್ರಗಳಲ್ಲಿ ಒಂದಾದ ರಾಸ್ ತನುರಾ, ಪ್ರತಿದಿನ 5,50,000 ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಇದು ಕೇವಲ ಸಂಸ್ಕರಣಾಗಾರವಲ್ಲದೆ, ಸೌದಿಯ ಕಚ್ಚಾ ತೈಲ ರಫ್ತಿನ ಪ್ರಮುಖ ಟರ್ಮಿನಲ್ ಕೂಡ ಆಗಿದೆ. ಈ ಘಟಕ ಸ್ಥಗಿತಗೊಂಡ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏಕಾಏಕಿ 10% ಏರಿಕೆ ಕಂಡಿದೆ.

​ವರದಿಗಳ ಪ್ರಕಾರ, ಅಮೆರಿಕದ ಯುದ್ಧ ವಿಮಾನಗಳಿಗೆ ಸೌದಿ ಅರೇಬಿಯಾ ನೀಡುತ್ತಿರುವ ಲಾಜಿಸ್ಟಿಕ್ ಬೆಂಬಲ ಮತ್ತು ಇಂಧನ ಪೂರೈಕೆಯೇ ಇರಾನ್ ಕೆಂಗಣ್ಣಿಗೆ ಕಾರಣವಾಗಿದೆ. ಈ ಹಿಂದೆ ಕೇವಲ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸುತ್ತಿದ್ದ ಇರಾನ್, ಈಗ ತನ್ನ ಕಾರ್ಯತಂತ್ರ ಬದಲಿಸಿದ್ದು ಸೌದಿ, ಯುಎಇ ಮತ್ತು ಕತಾರ್‌ನಂತಹ ರಾಷ್ಟ್ರಗಳ ಆರ್ಥಿಕ ಮೂಲಗಳ ಮೇಲೆ ದಾಳಿ ನಡೆಸುತ್ತಿದೆ.

​ಹಿಂದಿನ ದಾಳಿಗಳ ಹಿನ್ನೆಲೆ: ಅರಾಮ್ಕೊ ಮೇಲೆ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ‘ಅಬ್ಕೈಕ್’ ಮತ್ತು ‘ಖುರೈಸ್’ ಘಟಕಗಳ ಮೇಲೆ 10ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ದಾಳಿ ನಡೆಸಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡಿದ್ದರು.

​ಮುನ್ನೆಚ್ಚರಿಕೆ ಕ್ರಮ
​ಸದ್ಯದ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾವುದೇ ಹೆಚ್ಚಿನ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಪ್ರಾದೇಶಿಕ ಸಂಘರ್ಷ ಹೀಗೆಯೇ ಮುಂದುವರಿದರೆ ವಿಶ್ವದಾದ್ಯಂತ ಇಂಧನ ದರದಲ್ಲಿ ಭಾರೀ ಸ್ಫೋಟ ಸಂಭವಿಸುವ ಭೀತಿ ಎದುರಾಗಿದೆ.