ಡೈಲಿ ವಾರ್ತೆ: ಮಾ./02/2026

ಉಳ್ಳಾಲ ಮಸೀದಿಗೆ ಬಾಂಬ್ ಬೆದರಿಕೆ: ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಭಾಧ್ಯಕ್ಷ ಯು.ಟಿ. ಖಾದರ್ ಸೂಚನೆ

​ಮಂಗಳೂರು: ಕೋಮು ಸೌಹಾರ್ದತೆಯ ಕೇಂದ್ರಬಿಂದುವಾಗಿರುವ ಉಳ್ಳಾಲದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಸಮರ ಸಾರುವಂತೆ ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದ್ದಾರೆ.

​ಉಳ್ಳಾಲದ ಪ್ರಸಿದ್ಧ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ಸಮಾಜದ ಶಾಂತಿ ಕದಡುವ ಇಂತಹ ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ತಿಳಿಸಿದ್ದಾರೆ.

​ಘಟನೆಯ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರೊಂದಿಗೆ ತುರ್ತು ಮಾತುಕತೆ ನಡೆಸಿದ ಸಭಾಧ್ಯಕ್ಷರು, ತಕ್ಷಣವೇ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಂತೆ ಸೂಚಿಸಿದ್ದಾರೆ. “ಉಳ್ಳಾಲದಲ್ಲಿ ದಶಕಗಳಿಂದಲೂ ಸರ್ವ ಧರ್ಮೀಯರು ಅಣ್ಣ-ತಮ್ಮಂದಿರಂತೆ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಇಂತಹ ಪವಿತ್ರ ನೆಲದಲ್ಲಿ ವಿಷಬೀಜ ಬಿತ್ತಲು ಯತ್ನಿಸುವವರ ಹುನ್ನಾರವನ್ನು ಪೊಲೀಸ್ ಇಲಾಖೆ ಮೊಳಕೆಯಲ್ಲೇ ಚಿವುಕಬೇಕು,” ಎಂದು ಅವರು ಎಚ್ಚರಿಸಿದ್ದಾರೆ.

​ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಯತ್ನ:
​ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರಲ್ಲಿ ಭಯ ಭೀತಿ ಹುಟ್ಟಿಸುವ ಪೋಸ್ಟ್ ಹಾಕುವ ಮೂಲಕ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಸಂಚು ರೂಪಿಸಲಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ವಿಭಾಗದ ಮೂಲಕ ತನಿಖೆ ತೀವ್ರಗೊಳಿಸಿ, ಇಂತಹ ಪ್ರಚೋದನಾಕಾರಿ ಸಂದೇಶಗಳ ಹಿಂದೆ ಇರುವ ಶಕ್ತಿಗಳನ್ನು ಬಯಲಿಗೆಳೆಯಲು ಕಮಿಷನರ್ ಅವರಿಗೆ ಸೂಚಿಸಲಾಗಿದೆ.