

ಡೈಲಿವಾರ್ತೆ:12/ಮಾರ್ಚ್/2026


ಗ್ಯಾಸ್ ಸರಬರಾಜು ವಾಹನಕ್ಕೇ ಕನ್ನ ಹಾಕಿದ್ದ ಕಳ್ಳರು – ಇಬ್ಬರು ಖದೀಮರು ಅಂದರ್!

ರಾಮನಗರ: ಜಿಲ್ಲೆಯ ಬಿಡದಿ ವ್ಯಾಪ್ತಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಗ್ಯಾಸ್ ಸಿಲಿಂಡರ್ ಸರಬರಾಜು ವಾಹನದಿಂದ ಸಿಲಿಂಡರ್‌ಗಳನ್ನು ಕದ್ದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಿಡದಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮಹೇಶ್ ನಾಯಕ್ (19) ಮತ್ತು ಗೋವಿಂದರಾಜು (20) ಎಂದು ಗುರುತಿಸಲಾಗಿದೆ.
ರಾಮನಗರ ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಲಾಗಿದ್ದ ಗ್ಯಾಸ್ ಸರಬರಾಜು ವಾಹನವೇ ಕಳ್ಳರ ಗುರಿಯಾಗಿತ್ತು. ವಾಹನದಲ್ಲಿದ್ದ 8 ಗ್ಯಾಸ್ ಸಿಲಿಂಡರ್‌ಗಳನ್ನು ಕಳ್ಳತನ ಮಾಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಿಡದಿ ಪೊಲೀಸರು ತನಿಖೆ ಕೈಗೊಂಡು, ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತರಿಂದ ಕಳವು ಮಾಡಲಾಗಿದ್ದ 8 ಗ್ಯಾಸ್ ಸಿಲಿಂಡರ್‌ಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.