

ಡೈಲಿವಾರ್ತೆ:12/ಮಾರ್ಚ್/2026


ಬ್ರಹ್ಮಾವರ: ಮಾಚ್ 14, 15 ರಂದು ಬಿಜೆಪಿ ಗ್ರಾಮಾಂತರ ಯುವ ಮೋರ್ಚಾದಿಂದ ಭವ್ಯ ‘ಅಟಲ್ ಟ್ರೋಫಿ’ ಕ್ರಿಕೆಟ್ ಪಂದ್ಯಾಟ

ಬ್ರಹ್ಮಾವರ: ಭಾರತೀಯ ಜನತಾ ಪಾರ್ಟಿ ಉಡುಪಿ ಗ್ರಾಮಾಂತರ ಯುವ ಮೋರ್ಚಾ ವತಿಯಿಂದ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್‌ಪಾಲ್ ಎ. ಸುವರ್ಣ ಅವರ ನೇತೃತ್ವದಲ್ಲಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ “ಅಟಲ್ ಟ್ರೋಫಿ” 90 ಗಜಗಳ ಕ್ರಿಕೆಟ್ ಪಂದ್ಯಾಟವನ್ನು ಮಾರ್ಚ್ 14 ಮತ್ತು 15 ರಂದು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ್ ಕುಲಾಲ್ ತಿಳಿಸಿದರು.
ಗುರುವಾರ ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಪಕ್ಷ ಸಂಘಟನೆ ಹಾಗೂ ಯುವಶಕ್ತಿಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಉಡುಪಿ ಗ್ರಾಮಾಂತರ ಮಂಡಲದ 13 ಪಂಚಾಯತ್ ವ್ಯಾಪ್ತಿಯ ಯುವ ಕಾರ್ಯಕರ್ತರಿಗಾಗಿ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ಬೆಳಿಗ್ಗೆ 9 ಗಂಟೆಗೆ ಪಂದ್ಯಾಟದ ಉದ್ಘಾಟನೆ ನೆರವೇರಲಿದ್ದು, ಭಾನುವಾರ ಸಂಜೆ 5:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದು. ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ನಾಯಕರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ,” ಎಂದರು.
ಯುವಜನತೆಗೆ ಅಟಲ್ ಜೀ ಆದರ್ಶಗಳ ಸಂದೇಶ:ಪ್ರಥ್ವಿ ರಾಜ್ ಶೆಟ್ಟಿ

ಬಿಜೆಪಿ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಮಾತನಾಡಿ, “ಯುವಕರ ಪ್ರೇರಣಾಶಕ್ತಿಯಾಗಿರುವ ಶಾಸಕ ಯಶ್‌ಪಾಲ್ ಸುವರ್ಣ ಅವರ ಮಾರ್ಗದರ್ಶನದಲ್ಲಿ ಈ ವಿಭಿನ್ನ ಕ್ರೀಡಾಕೂಟ ನಡೆಯುತ್ತಿದೆ. ಪ್ರತಿ ಗ್ರಾಮ ಪಂಚಾಯತ್‌ನಿಂದ ಕೇವಲ ಒಂದು ಆಯ್ದ ತಂಡಕ್ಕೆ ಮಾತ್ರ ಇಲ್ಲಿ ಅವಕಾಶ ನೀಡಲಾಗಿದ್ದು, ಬಿಜೆಪಿ ಪ್ರಮುಖರು ಆ ತಂಡಗಳಿಗೆ ಮೆಂಟರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. 18 ರಿಂದ 20 ವರ್ಷದ ಯುವಕರನ್ನು ಪಕ್ಷದ ತತ್ವ ಸಿದ್ಧಾಂತಗಳತ್ತ ಆಕರ್ಷಿಸುವುದು ಈ ಕೂಟದ ಪ್ರಮುಖ ಉದ್ದೇಶ,” ಎಂದರು. ಮುಂದುವರಿದು ಮಾತನಾಡಿದ ಅವರು, “ಇಂದಿನ ಯುವ ಪೀಳಿಗೆ ಮೋದಿ ಯುಗವನ್ನು ಕಾಣುತ್ತಿದೆ. ಆದರೆ ದೇಶ ಕಟ್ಟುವಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ನೀಡಿದ ಅಪ್ರತಿಮ ಕೊಡುಗೆಯನ್ನು ಈ ತಲೆಮಾರಿಗೆ ಪರಿಚಯಿಸುವುದು ಅನಿವಾರ್ಯವಾಗಿದೆ. ಕ್ರೀಡೆಯ ಮೂಲಕ ವಾಜಪೇಯಿ ಅವರ ಜೀವನ ಚರಿತ್ರೆ ಮತ್ತು ದೇಶಸೇವೆಯ ಸಂದೇಶವನ್ನು ಯುವಜನರಿಗೆ ತಲುಪಿಸುವ ಕೆಲಸ ಈ ಎರಡು ದಿನಗಳಲ್ಲಿ ನಡೆಯಲಿದೆ. ಮುಂಬರುವ ಪಂಚಾಯತ್ ಚುನಾವಣೆಗಳ ದೃಷ್ಟಿಯಿಂದಲೂ ಈ ಸಂಘಟನೆ ಅತ್ಯಂತ ಮಹತ್ವದ್ದಾಗಿದೆ,” ಎಂದು ತಿಳಿಸಿದರು.
ಸಜ್ಜಾದ ಯುವ ಮೋರ್ಚಾ ತಂಡ:

ಕ್ರೀಡಾಕೂಟದ ಯಶಸ್ಸಿಗಾಗಿ ಈಗಾಗಲೇ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಹಾಗೂ ಪಂದ್ಯಾಟದ ಸಂಚಾಲಕ ಪ್ರದೀಪ್ ಕುಂದರ್ ಅವರ ನೇತೃತ್ವದಲ್ಲಿ 13 ಪಂಚಾಯತ್‌ಗಳ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಕಾರ್ನರ್ ಮೀಟಿಂಗ್‌ಗಳನ್ನು ನಡೆಸಲಾಗಿದೆ. ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷ ಗೌತಮ್ ಮತ್ತು ಪ್ರಧಾನ ಕಾರ್ಯದರ್ಶಿ ಸುಶಾಂತ್ ಪೂಜಾರಿ ಅವರ ತಂಡವು ಕ್ಷೇತ್ರದಾದ್ಯಂತ ಕ್ರೀಡಾ ಸಂಚಲನ ಮೂಡಿಸಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರದೀಪ್ ಕುಂದರ್, ಗೌತಮ್ ಅಗ್ರಹಾರ, ದೇವಾನಂದ್ ನಾಯಕ್, ಸುಶಾಂತ್ ಪೂಜಾರಿ, ಆಯುಷ್ ಪೂಜಾರಿ, ಮಿಥುನ್, ಸಚಿನ್ ಮೊದಲಾದವರು ಉಪಸ್ಥಿತರಿದ್ದರು.