ಡೈಲಿವಾರ್ತೆ:18/ಮಾರ್ಚ್/2026

ಕೋಟ| ಸಿಸಿ ಕ್ಯಾಮೆರಾ ವಿವಾದಕ್ಕೆ ತೀವ್ರ ತಿರುವು: ವೃದ್ಧೆಯ ಮೇಲೆ ಹಲ್ಲೆ, ಜೀವ ಬೆದರಿಕೆ ಆರೋಪ – ಏಳು ಮಂದಿ ವಿರುದ್ಧ ಪ್ರಕರಣ ದಾಖಲು

ಕೋಟ: ಸಿಸಿ ಕ್ಯಾಮೆರಾ ಅಳವಡಿಕೆ ವಿಚಾರವಾಗಿ ಉಂಟಾದ ನೆರೆಹೊರೆಯ ಕಲಹ ತೀವ್ರ ಸ್ವರೂಪ ಪಡೆದುಕೊಂಡು, ವೃದ್ಧೆಯೊಬ್ಬರ ಮೇಲೆ ದಾಳಿ ಹಾಗೂ ಜೀವ ಬೆದರಿಕೆ ಹಾಕಿದ ಘಟನೆ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದಲ್ಲಿ ನಡೆದಿದೆ.

ಪಿರ್ಯಾದಿದಾರರಾದ ರಾಧು ಪೂಜಾರ್ತಿ (65) ಅವರ ದೂರಿನ ಪ್ರಕಾರ, ತಮ್ಮ ಮನೆಯ ಎದುರು ವಾಸವಾಗಿರುವ ಪ್ರೇಮ ಪೂಜಾರಿಯವರು ಮನೆಗೆ ಮುಖಮಾಡಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಇದರಿಂದ ಅಸೌಕರ್ಯ ಉಂಟಾಗುತ್ತಿದೆ ಎಂದು ಅವರು ದಿನಾಂಕ 09/03/2026ರಂದು ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು

ಈ ಹಿನ್ನೆಲೆಯಲ್ಲಿ ಕೋಪಗೊಂಡ ಆರೋಪಿಗಳಾದ ಪ್ರೇಮ ಪೂಜಾರಿ, ಪ್ರವೀಣ್ ಟಿ ಪೂಜಾರಿ, ಯಶ್ವಿತಾ, ಪೂರ್ಣಿಮಾ, ಶಾಂತ, ಪ್ರಮೀಳಾ ಮತ್ತು ತಮ್ಮಯ್ಯ ಅವರು ದಿನಾಂಕ 13/03/2026ರಂದು ಬೆಳಿಗ್ಗೆ 08:25 ಗಂಟೆ ಸುಮಾರಿಗೆ ಪಿರ್ಯಾದಿದಾರರ ಮನೆಯ ಬಳಿ ಏಕಾಏಕಿ ಪ್ರವೇಶಿಸಿ, ಅವರನ್ನು ಸುತ್ತುವರಿದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಗಳಿಂದ ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ, ಮನೆಯ ಸುತ್ತಮುತ್ತ ಸಂಚರಿಸಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದರೆಂದು ಆರೋಪಿಸಲಾಗಿದೆ.

ಪಿರ್ಯಾದಿದಾರರ ಕಿರುಚಾಟ ಕೇಳಿ ಅವರ ಮಗ ಮತ್ತು ಸಂಬಂಧಿಕರು ಸ್ಥಳಕ್ಕೆ ಧಾವಿಸಿ, ಗಾಯಗೊಂಡ ಅವರನ್ನು ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಘಟನೆಗೆ ಆರೋಪಿಗಳ ಸಂಬಂಧಿ ಹರೀಶ ಅವರ ಕುಮ್ಮಕ್ಕು ಕಾರಣವೆಂದು ದೂರಿನಲ್ಲಿ ಹೇಳಲಾಗಿದೆ.

ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 45/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)ಯ ಕಲಂ 329(3), 126(2), 352, 115(2), 351(2), 49 ಮತ್ತು 190 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.