ಡೈಲಿವಾರ್ತೆ:18/ಮಾರ್ಚ್/2026

20 ರೂ. ಗ್ಯಾಸ್‌ ಬಿಲ್‌ ಹೆಸರಿನಲ್ಲಿ 9.78 ಲಕ್ಷ ರೂ. ಸೈಬರ್ ಮೋಸ: ಎಪಿಕೆ ಫೈಲ್ ಕ್ಲಿಕ್ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ಉಡುಪಿಯ ದಂಪತಿ

ಉಡುಪಿ: ಗ್ಯಾಸ್‌ ಬಿಲ್‌ ಬಾಕಿ ಎಂಬ ನೆಪದಲ್ಲಿ ಸೈಬರ್ ವಂಚಕರು ದಂಪತಿಯನ್ನು ಲಕ್ಷಾಂತರ ರೂಪಾಯಿ ಮೋಸಗೊಳಿಸಿರುವ ಘಟನೆ ಉಡುಪಿ ಜಿಲ್ಲೆಯಲ್ಲಿಬೆಳಕಿಗೆ ಬಂದಿದೆ.

ಪಿರ್ಯಾದಿದಾರರಾದ ಮಂಗಳ ರವಿದಾಸ್ ನಾಯಕ್‌ (64), ಶಿವಳ್ಳಿ ಗ್ರಾಮದ ನಿವಾಸಿಯಾಗಿದ್ದು, ಇವರ ಗಂಡ ರವಿದಾಸ್ ರಾಘವೇಂದ್ರ ನಾಯಕ್ ಅವರಿಗೆ ಮಾರ್ಚ್ 17 ರಂದು ಮಧ್ಯಾಹ್ನ 2:30ರ ಸುಮಾರಿಗೆ ಅಪರಿಚಿತ ವ್ಯಕ್ತಿಯಿಂದ ಮೊಬೈಲ್ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ “ನಿಮ್ಮ ಗ್ಯಾಸ್‌ ಬಿಲ್‌ನಲ್ಲಿ ₹20 ಬಾಕಿ ಇದೆ” ಎಂದು ಹೇಳಿ ತಕ್ಷಣ ಪಾವತಿಸಲು ಸೂಚಿಸಿದ್ದಾನೆ.

ನಂತರ 8294278381 ಸಂಖ್ಯೆಯಿಂದ ವಾಟ್ಸಪ್ ಮೂಲಕ “Mahangar Gas Bill Update.apk” ಎಂಬ ಎಪಿಕೆ ಫೈಲ್ ಕಳುಹಿಸಲಾಗಿದ್ದು, ಅದನ್ನು ನಂಬಿ ಪಿರ್ಯಾದಿದಾರರ ಗಂಡ ಕ್ಲಿಕ್ ಮಾಡಿದ್ದಾರೆ. ಇದರಿಂದ ಮೊಬೈಲ್‌ಗೆ ದುರುದ್ದೇಶಿತ ಅಪ್ಲಿಕೇಶನ್ ಇನ್‌ಸ್ಟಾಲ್ ಆಗಿದೆ.
ಮುಂದೆ, ಹಣ ಪಾವತಿ ಆಗಿಲ್ಲ ಎಂದು ಹೇಳಿ, ಬ್ಯಾಂಕ್ ವಿವರಗಳನ್ನು ಪಡೆದುಕೊಂಡ ಆರೋಪಿಗಳು ಬಂಧನ್ ಬ್ಯಾಂಕ್, ಯೆಸ್ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗಳ ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಕಲೆಹಾಕಿದ್ದಾರೆ.
ಇದರಿಂದ ಒಟ್ಟು ₹9,78,036.50 ಹಣವನ್ನು ವಿವಿಧ ಖಾತೆಗಳಿಂದ ವರ್ಗಾಯಿಸಿಕೊಂಡು ವಂಚನೆ ನಡೆಸಲಾಗಿದೆ.

ಈ ಸಂಬಂಧ ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಾಧ ಕ್ರಮಾಂಕ 14/2026 ರಂತೆ ಐಟಿ ಆಕ್ಟ್‌ನ 66(C), 66(D) ಹಾಗೂ ಬಿಎನ್‌ಎಸ್‌ ಕಲಂ 318(4) ಅಡಿಯಲ್ಲಿ ತನಿಖೆ ಮುಂದುವರಿದಿದೆ.

ಸೂಚನೆ: ಸಾರ್ವಜನಿಕರು ಅಪರಿಚಿತರಿಂದ ಬರುವ ಕರೆಗಳು, ವಾಟ್ಸಪ್ ಲಿಂಕ್‌ಗಳು ಅಥವಾ ಎಪಿಕೆ ಫೈಲ್‌ಗಳನ್ನು ನಂಬಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.