ಡೈಲಿವಾರ್ತೆ:18/ಮಾರ್ಚ್/2026

ಗುಣಮಟ್ಟ-ಕೌಶಲ್ಯಧಾರಿತ ಶಿಕ್ಷಣ ವ್ಯವಸ್ಥೆಯಿಂದ
ವಿಕಸಿತ ಭಾರತ ನಿರ್ಮಾಣ ಸಾಧ್ಯ: ಕುಲಪತಿ ಪ್ರೊ.ಜಯಕರ ಅಭಿಮತ

ಬೆಂಗಳೂರು:ಮಾ.18: ಶಿಕ್ಷಣ ಕ್ಷೇತ್ರವು ರಾಷ್ಟ ನಿರ್ಮಾಣದ ಭಾಗವಾಗಿದೆ. ಗುಣಮಟ್ಟ ಮತ್ತು ಕೌಶಲ್ಯಧಾರಿತ ಶಿಕ್ಷಣ ವ್ಯವಸ್ಥೆಯಿಂದ ವಿಕಸಿತ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಯಕರ ಎಸ್.ಎಂ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗ, ಸೆಂಟ್ ಪೌಲ್ಸ್‌ ಕಾಲೇಜ್ ಆಫ್ ಎಜುಕೇಷನ್, ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜ್ ಆಫ್ ಎಜುಕೇಶನ್ ಹಾಗೂ ಪಿಎಂ ಉಷಾ ಸಹಯೋಗದೊಂದಿಗೆ ಆಯೋಜಿಸಿದ್ದ ನಿಮ್ಮ ಕೈಯಲ್ಲಿ ಕೃತಕ ಬುದ್ಧಿಮತ್ತೆ ಎಂಬ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣವೆಂದರೆ ರಾಷ್ಟ್ರ ನಿರ್ಮಾಣದ ಮೂಲಸ್ತಂಭ. ಶಿಕ್ಷಣ ಮತ್ತು ಬೋಧನೆ ಎಂಬುದು ಕೇವಲ ಜ್ಞಾನ ಹಂಚಿಕೆಗೆ ಸೀಮಿತವಲ್ಲ, ಅದು ವ್ಯಕ್ತಿತ್ವ ನಿರ್ಮಾಣದ ಪ್ರಕ್ರಿಯೆಯಾಗಿದೆ. ಒಬ್ಬ ಉತ್ತಮ ಶಿಕ್ಷಕನು ವಿದ್ಯಾರ್ಥಿಯ ಜೀವನವನ್ನು ರೂಪಿಸುವ ಶಕ್ತಿಯನ್ನು ಹೊಂದಿದ್ದಾನೆ. ಆದ್ದರಿಂದ ಶಿಕ್ಷಣದ ಗುಣಮಟ್ಟವೇ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ತಿಳಿಸಿದರು.

ಇಂದು ನಮ್ಮ ದೇಶದಲ್ಲಿ ಜನಸಂಖ್ಯೆ ಹಾಗೂ ಯುವಶಕ್ತಿ ಸಾಕಷ್ಟಿದ್ದರೂ, ಸಮರ್ಪಿತ ಮತ್ತು ನಿಪುಣ ಶಿಕ್ಷಕರ ಕೊರತೆ ಕಾಣಿಸುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ, ಅವರಿಗೆ ಮಾರ್ಗದರ್ಶನ ನೀಡುವ ಗುಣಮಟ್ಟದ ಶಿಕ್ಷಕರ ಅಗತ್ಯವೂ ಹೆಚ್ಚುತ್ತಿದೆ. ಆ ನಿಟ್ಟಿನಲ್ಲಿ ಕೌಶಲ್ಯಧಾರಿತ ಶಿಕ್ಷಕರು ಅತ್ಯಂತ ಮುಖ್ಯ. ಶಿಕ್ಷಣವನ್ನು ಬಲಪಡಿಸಲು ಮತ್ತು ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು, ಗುಣಮಟ್ಟದ ಶಿಕ್ಷಕರ ನಿರ್ಮಾಣವೇ ನಮ್ಮ ಮೊದಲ ಆದ್ಯತೆಯಾಗಬೇಕು ಎಂದರು.

ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದ ಶಿಕ್ಷಣ ಮತ್ತು ತರಬೇತಿ ಶಾಲೆಯ ಸಹಪ್ರಾಧ್ಯಪಕ ಡಾ. ತಿಯಾಗು ಅವರು ಮಾತನಾಡಿ, ಭವಿಷ್ಯವು ಮಾನವ ಮತ್ತು ಕೃತಕ ಬುದ್ಧಿಮತ್ತೆಯ ಸಂಯೋಜನೆಯಾದ ಹೈಬ್ರಿಡ್ ಇಂಟೆಲಿಜೆನ್ಸ್ ಕಡೆ ಸಾಗುತ್ತಿದೆ. ಈ ಮಾದರಿಯಲ್ಲಿ, ಮಾನವನು ತನ್ನ ಸೃಜನಶೀಲತೆ, ತೀರ್ಮಾನ ಸಾಮರ್ಥ್ಯ ಮತ್ತು ಅನುಭವವನ್ನು ಬಳಸಿಕೊಂಡು, ಕೃತಕ ಬುದ್ಧಿಮತ್ತೆಯನ್ನು ಸಹಾಯಕ ಸಾಧನವಾಗಿ ಬಳಸುತ್ತಾನೆ. ಇದರಿಂದ ಕೆಲಸಗಳನ್ನು ಹೆಚ್ಚು ವೇಗವಾಗಿ, ನಿಖರವಾಗಿ ಮತ್ತು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆʼ ಎಂದು ವಿವರಿಸಿದರು.

ʻಕೃತಕ ಬುದ್ಧಿಮತ್ತೆಯ ಸಹಾಯದಿಂದ ಮಾಹಿತಿಗೆ ಸುಲಭ ಪ್ರವೇಶ ಸಿಗುತ್ತದೆ. ಕಡಿಮೆ ಶ್ರಮದಲ್ಲಿ ಹೆಚ್ಚಿನ ಫಲಿತಾಂಶ ಪಡೆಯಬಹುದು ಮತ್ತು ಸಂಕೀರ್ಣ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಹಿಡಿಯಬಹುದು. ಹೀಗಾಗಿ ಮಾನವ ಸಾಮರ್ಥ್ಯವನ್ನು ವಿಸ್ತರಿಸುವಲ್ಲಿ ಮತ್ತು ಭವಿಷ್ಯದ ಶಿಕ್ಷಣ, ಸಂಶೋಧನೆ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವಲ್ಲಿ ಹೈಬ್ರಿಡ್ ಇಂಟೆಲಿಜೆನ್ಸ್ ಮಹತ್ವದ ಪಾತ್ರ ವಹಿಸುತ್ತದೆʼ ಎಂದು ಅಭಿಪ್ರಾಯಪಟ್ಟರು.

ಡಾ.ಎಂ.ಸಿ.ಎರ್ರಿಸ್ವಾಮಿ, ಡಾ.ವಾಣಿಶ್ರೀ ಕೊಪ್ಪದ್ ಅವರುಗಳು ಇದೇ ವೇಳೆಯಲ್ಲಿ ಸಹ ಮಾತನಾಡಿದರು.

ಕಾರ್ಯಾಗಾರದಲ್ಲಿ ಪಿಎಂ ಉಷಾ ನೋಡಲ್ ಆಫೀಸರ್ ಹಾಗೂ ಹಿರಿಯ ಪ್ರಾಧ್ಯಾಪಕರಾದ ಪ್ರೊ.ವಿ.ಸುದೇಶ್, ಸೆಂಟ್ ಪೌಲ್ಸ್ ಕಾಲೇಜಿನ ಪ್ರಾಂಶುಪಾಲೆ ಡಾ.ರೂಪ ಎನ್‌.ಟಿ., ಅಂಬೇಡ್ಕರ್ ಕಾಲೇಕ್ ಆಫ್ ಎಜುಕೇಶನ್ ಪ್ರಾಂಶುಪಾಲ ಡಾ.ಶಿವಣ್ಣ, ಶಿಕ್ಷಣ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ.ಪ್ರದೀಪ್ ಕುಮಾರ್ ಟಿ., ಡಾ.ತಿಮ್ಮರಾಜು ಟಿ., ಡಾ.ನವೀನ್ ಕುಮಾರ್ ಎಲ್.ಸಿ., ಡಾ.ನಂದಿನಿ ಎನ್., ಡಾ.ಕಲ್ಯಾಣಿ ಕೆ., ಡಾ.ಶೋಭಾ ಎಂ., ಡಾ.ನಂದಿನಿ ಎ., ಸಿಬ್ಬಂದಿ ವರ್ಗದವರು, ಸಂಶೋಧನಾರ್ಥಿಗಳು, ಎಂ.ಇಡಿ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಾಣಾರ್ಥಿಗಳು ಮತ್ತಿತರರು ಭಾಗಿಯಾಗಿದ್ದರು.