ಡೈಲಿವಾರ್ತೆ:21ಮಾರ್ಚ್/2026

ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ದುರಂತ: ಚಾರ್ಮಾಡಿ ಘಾಟಿಯಲ್ಲಿ ಟಿಟಿ ವಾಹನ ಪಲ್ಟಿ – ಭದ್ರಾವತಿ ಮೂಲದ ವ್ಯಕ್ತಿ ಸಾವು

​ಬೆಳ್ತಂಗಡಿ: ಚಾರ್ಮಾಡಿ ಘಾಟ್‌ನ ಅಪಾಯಕಾರಿ ತಿರುವುಗಳಲ್ಲಿ ಅಪಘಾತಗಳ ಸರಣಿ ಮುಂದುವರಿದಿದ್ದು, ಶನಿವಾರ (ಮಾರ್ಚ್ 21) ನಡೆದ ಭೀಕರ ಅಪಘಾತದಲ್ಲಿ ಭದ್ರಾವತಿ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಭದ್ರಾವತಿಯಿಂದ ಧರ್ಮಸ್ಥಳಕ್ಕೆ ಯಾತ್ರೆ ಹೊರಟಿದ್ದ ಟೆಂಪೋ ಟ್ರಾವೆಲರ್ (TT) ವಾಹನವು ಚಾರ್ಮಾಡಿ ಘಾಟಿಯ 10ನೇ ತಿರುವಿನ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಘಾಟಿಯ ಕಡಿದಾದ ಹಾದಿಯಲ್ಲಿ ವಾಹನ ನಿಯಂತ್ರಣಕ್ಕೆ ಸಿಗದೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ವಾಹನದಲ್ಲಿದ್ದ 10 ಮಂದಿ ಪೈಕಿ ಒಂಬತ್ತು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಶೇಖರಪ್ಪ (59) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯರ ನೆರವಿನಿಂದ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರು ಹಾಗೂ ಇತರ ವಾಹನ ಸವಾರರು ತಕ್ಷಣ ಕಾರ್ಯಪ್ರವೃತ್ತರಾಗಿ, ವಾಹನದ ಒಳಗಿದ್ದವರನ್ನು ಹೊರತೆಗೆದು ಮಾನವೀಯತೆ ಮೆರೆದಿದ್ದಾರೆ.

ಘಟನೆಯಿಂದಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.