ಡೈಲಿವಾರ್ತೆ:21ಮಾರ್ಚ್/2026

ಕೋಟ: ಮಣೂರು ಶ್ರೀ ಮಹಾಲಿಂಗೇಶ್ವರ ದೇವರ ರಥೋತ್ಸವ ಸಂಭ್ರಮ – ಮಾರ್ಚ್ 31ರಿಂದ ಏಪ್ರಿಲ್ 4ರವರೆಗೆ ಧಾರ್ಮಿಕ ಕಾರ್ಯಕ್ರಮಗಳ ವೈಭವ

ಕೋಟ : ಮಣೂರು ಗ್ರಾಮದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವರ ಹಾಗೂ ಶ್ರೀ ಹೇರಂಬ ಮಹಾಗಣಪತಿ ದೇವರವರ ಸನ್ನಿಧಿಯಲ್ಲಿ ವಾರ್ಷಿಕ ರಥೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ್ 31ರಿಂದ ಏಪ್ರಿಲ್ 4ರವರೆಗೆ ವಿಜೃಂಭಣೆಯಿಂದ ನಡೆಯಲಿವೆ.

ಮಾರ್ಚ್ 30ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಬಳಿಕ ಪ್ರತಿದಿನವೂ ಪೂಜೆ, ಹೋಮ, ಭಜನೆ, ರಂಗಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.

ಮಾರ್ಚ್ 31ರಂದು ವಿಶೇಷ ಪೂಜೆಗಳು ಮತ್ತು ಭಕ್ತರ ಸೇವಾ ಕಾರ್ಯಕ್ರಮಗಳು ನಡೆಯಲಿದ್ದು, ಏಪ್ರಿಲ್ 1ರಂದು ಸಂಜೆ ರಥ ಸಂಭ್ರಮ ಪ್ರಮುಖ ಆಕರ್ಷಣೆಯಾಗಲಿದೆ. ಸಂಗೀತ, ನೃತ್ಯ ಹಾಗೂ ಭಕ್ತಿಗೀತೆಗಳ ಕಾರ್ಯಕ್ರಮಗಳು ಕೂಡ ಆಯೋಜಿಸಲಾಗಿದೆ.

ಏಪ್ರಿಲ್ 2ರಂದು ಬೆಳಿಗ್ಗೆ ವಿಶೇಷ ಪೂಜೆ ಹಾಗೂ ಮಹಾಪೂಜೆ ನಡೆಯಲಿದ್ದು, ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಏಪ್ರಿಲ್ 3ರಂದು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಪರ ಕಾರ್ಯಕ್ರಮಗಳು ಜರುಗಲಿವೆ.

ಉತ್ಸವದ ಪ್ರಮುಖ ಭಾಗವಾದ ರಥೋತ್ಸವವು ಏಪ್ರಿಲ್ 4ರಂದು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಅಲ್ಲದೆ ಈ ಎಲ್ಲಾ ದಿನಗಳಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸತೀಶ್ ಹೆಚ್ ಕುಂದರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.