ಡೈಲಿವಾರ್ತೆ:21ಮಾರ್ಚ್/2026

ಜೂಜಾಟದ ಅಡ್ಡೆ ಮೇಲೆ ಪೊಲೀಸ್ ದಾಳಿ: ತಪ್ಪಿಸಿಕೊಳ್ಳಲು ಓಡುವಾಗ ಬಿದ್ದು ಯುವಕ ಸಾವು

​ಹಾಸನ: ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಅರೆಕೆರೆ ಗ್ರಾಮದಲ್ಲಿ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ, ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಯುವಕನೊಬ್ಬ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಅರೆಕೆರೆ ಗ್ರಾಮದ ಪ್ರವೀಣ್ (34) ಮೃತಪಟ್ಟ ದುರ್ದೈವಿ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದ ಸಮೀಪದ ತಾವರೆಹಳ್ಳಿಯ ನಿರ್ಜನ ಪ್ರದೇಶದಲ್ಲಿ ಯುವಕರ ಗುಂಪೊಂದು ಜೂಜಾಟದಲ್ಲಿ ತೊಡಗಿತ್ತು ಎನ್ನಲಾಗಿದೆ.

ಜೂಜಾಟ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಜಾವಗಲ್ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಪೊಲೀಸರನ್ನು ಕಂಡ ತಕ್ಷಣ ಜೂಜಾಟದಲ್ಲಿ ತೊಡಗಿದ್ದ ಯುವಕರು ದಿಕ್ಕಾಪಾಲಾಗಿ ಓಡತೊಡಗಿದ್ದಾರೆ. ಈ ವೇಳೆ ಸ್ಥಳದಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ಪ್ರವೀಣ್ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ.

ಮೃತ ಪ್ರವೀಣ್ ಈ ಮೊದಲೇ ಮೂರ್ಛೆ ರೋಗದಿಂದ (Epilepsy) ಬಳಲುತ್ತಿದ್ದ ಎನ್ನಲಾಗಿದ್ದು, ಓಡುವ ಧಾವಂತದಲ್ಲಿ ಮೂರ್ಛೆ ಬಂದು ಬಿದ್ದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.

ಮೃತದೇಹದ ಮೇಲೆ ರಕ್ತದ ಕಲೆಗಳು ಕಂಡುಬಂದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಹಿಮ್ಸ್‌ (HIMS) ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

​ಘಟನೆಗೆ ಸಂಬಂಧಿಸಿದಂತೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.