

ಡೈಲಿವಾರ್ತೆ:21ಮಾರ್ಚ್/2026


ಹಿಂದೂ ಧರ್ಮದ ಶ್ರೇಣೀಕೃತ ವ್ಯವಸ್ಥೆಯೇ ಜಾತೀಯತೆ ಮತ್ತು ಅಸ್ಪೃಶ್ಯತೆಗೆ ಮೂಲ: ಶ್ಯಾಮರಾಜ್ ಬಿರ್ತಿ

ಹೆಬ್ರಿ: “ಹಿಂದೂ ಧರ್ಮದಲ್ಲಿರುವ ಶ್ರೇಣೀಕೃತ ವ್ಯವಸ್ಥೆಯೇ ಜಾತೀಯತೆಗೆ ಮೂಲವಾಗಿದೆ. ಈ ಜಾತೀಯತೆಯೇ ಅಸ್ಪೃಶ್ಯತೆ ಎಂಬ ಅನಿಷ್ಟ ಪದ್ಧತಿಗೆ ಮುಖ್ಯ ಕಾರಣ,” ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಪ್ರತಿಪಾದಿಸಿದರು.

ಹೆಬ್ರಿಯ ದೋರಿಯಾಲ್ ಎಂಬಲ್ಲಿ ಮಹಾಡ್ ಚಳುವಳಿಯ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ “ಮಹಾಡ್ ಕೆರೆ ಚಳುವಳಿ ಕಥಾ ಕಥನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ ದಲಿತರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಮಹಾಡ್ ಚಳುವಳಿಯ ಮಹತ್ವವನ್ನು ವಿವರಿಸಿದ ಅವರು, “ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಚೌದಾರ್ ಕೆರೆಯ ನೀರನ್ನು ಮುಟ್ಟಿ ಕುಡಿದದ್ದು ದಲಿತರ ಪಾಲಿನ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಾಗಿದೆ. ಮನುಷ್ಯರನ್ನು ಹುಟ್ಟಿನಿಂದಲೇ ಅಸ್ಪೃಶ್ಯರನ್ನಾಗಿ ನೋಡುವ ವ್ಯವಸ್ಥೆಯ ಬಗ್ಗೆ ನಾವು ಜಾಗೃತರಾಗಬೇಕು. ಚುನಾವಣಾ ಸಮಯದಲ್ಲಿ ‘ನಾವೆಲ್ಲಾ ಹಿಂದೂಗಳು, ನಾವೆಲ್ಲಾ ಒಂದು’ ಎಂದು ಬೊಗಳೆ ಬಿಡುವ ಹಿಂದುತ್ವವಾದಿಗಳು, ವಾಸ್ತವದಲ್ಲಿ ಜಾತೀಯತೆಯನ್ನು ಪೋಷಿಸುತ್ತಿದ್ದಾರೆ,” ಎಂದು ಕಿಡಿಕಾರಿದರು.
ಇತ್ತೀಚೆಗೆ ಹುಬ್ಬಳ್ಳಿ ಬಳಿ ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಏಳು ತಿಂಗಳ ಗರ್ಭಿಣಿ ಮಗಳನ್ನು ತಂದೆಯೇ ಹತ್ಯೆ ಮಾಡಿದ ಘಟನೆಯನ್ನು ಉಲ್ಲೇಖಿಸಿದ ಅವರು, “ಇದು ಇಂದಿನ ಜಲಂತ ವಾಸ್ತವ ಮತ್ತು ಜಾತೀಯತೆಯ ಕ್ರೂರ ಮುಖ,” ಎಂದರು.
ಮಹಾಡ್ ಚಳುವಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಸಂ.ಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರ್ ಮಾತನಾಡಿ, “1927 ಮಾರ್ಚ್ 20 ರಂದು ನಡೆದ ಮಹಾಡ್ ಚಳುವಳಿ ಅಸ್ಪೃಶ್ಯತೆ ವಿರುದ್ಧದ ಸ್ವಾಭಿಮಾನದ ಸಂಕೇತವಾಗಿದೆ. ಅಂದು ಕೆರೆಯ ನೀರನ್ನು ಪ್ರಾಣಿಗಳು ಕುಡಿಯಲು ಅವಕಾಶವಿತ್ತು, ಆದರೆ ಮನುಷ್ಯರಾದ ದಲಿತರಿಗೆ ಇರಲಿಲ್ಲ. ಈ ಐತಿಹಾಸಿಕ ದಿನವನ್ನು ಕೇವಲ ನಗರ ಪ್ರದೇಶಗಳಿಗಿಂತ ನಮ್ಮ ಸಮುದಾಯದ ವಸತಿ ಪ್ರದೇಶಗಳಲ್ಲಿ ಆಚರಿಸುವುದು ಹೆಚ್ಚು ಅರ್ಥಪೂರ್ಣ,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಾವರ ತಾಲೂಕು ಸಂಚಾಲಕರಾದ (ದ.ಸಂ.ಸ) ಶ್ಯಾಮಸುಂದರ ತೆಕ್ಕಟ್ಟೆ, ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಜಿಲ್ಲಾ ಸಂಘಟನಾ ಸಂಚಾಲಕ
ದೇವು ಹೆಬ್ರಿ, ಅಲ್ಲದೆ ಕುಮಾರ್ ಕೋಟಾ, ಬಿರ್ತಿ ಸುರೇಶ, ಕೆ.ಡಿ. ಹರೀಶ್ಚಂದ್ರ, ವಿಜಯ ಗಿಳಿಯಾರು, ಪ್ರಶಾಂತ್ ಬಿರ್ತಿ, ಮತ್ತು ಬೋಜರಾಜ್ ಕಾವ್ರಾಡಿ ಅವರು ಪಾಲ್ಗೊಂಡಿದ್ದರು.
ಸಂತೋಷ ಮಾಸ್ಟರ್ ಮುದ್ರಾಡಿ ಸ್ವಾಗತಿಸಿದರೆ, ಹೆಬ್ರಿ ತಾಲೂಕು ಸಂಚಾಲಕ ಅಣ್ಣಪ್ಪ ಮಾಸ್ಟರ್ ಮುದ್ರಾಡಿ ವಂದಿಸಿದರು.