


ಡೈಲಿವಾರ್ತೆ:04/ಏಪ್ರಿಲ್ /2026

ಮಣಿಪಾಲದಲ್ಲಿ ಆಟೋ ಚಾಲಕ ಆತ್ಮಹತ್ಯೆ: ಒಬ್ಬನೇ ಮಗನನ್ನು ಕಳೆದುಕೊಂಡು ಹೆತ್ತವರು ಕಂಗಾಲು

ಮಣಿಪಾಲ: ಇಲ್ಲಿನ ಸರಳಬೆಟ್ಟುವಿನ ಉಮಾಮಹೇಶ್ವರಿ ದೇವಸ್ಥಾನದ ಸಮೀಪವಿರುವ ಮನೆಯೊಂದರಲ್ಲಿ ಆಟೋ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮಂಜುನಾಥ ಅಡಿಗ (34) ಮೃತಪಟ್ಟ ದುರ್ದೈವಿ.
ಘಟನೆಯ ವಿವರ:
ಮೃತ ಮಂಜುನಾಥ ಅಡಿಗ ಅವರು ಮಣಿಪಾಲದ ಸರಳಬೆಟ್ಟು ಪರಿಸರದಲ್ಲಿ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಕೇವಲ ಆಟೋ ಅಷ್ಟೇ ಅಲ್ಲದೆ, ಸ್ವಂತ ಬಾಡಿಗೆ ಕಾರುಗಳನ್ನು ಹೊಂದಿದ್ದ ಇವರು, ಪಡುಬಿದ್ರೆಯ ಖಾಸಗಿ ಕಂಪನಿಯೊಂದರ ಜೊತೆ ಬಾಡಿಗೆ ಒಪ್ಪಂದ ಮಾಡಿಕೊಂಡಿದ್ದರು. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಗುರುತಿಸಿಕೊಂಡಿದ್ದ ಇವರು, ಕಳೆದ ಎರಡು-ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.
ಮೃತ ಮಂಜುನಾಥ ಅಡಿಗ ಅವರ ತಾಯಿ ಕೆಎಂಸಿ ಆಸ್ಪತ್ರೆಯ ಶುಶ್ರೂಷಾ ವಿಭಾಗದ ನಿವೃತ್ತ ಪ್ರಾಂಶುಪಾಲರಾಗಿದ್ದಾರೆ. ದಂಪತಿಗೆ ಮಕ್ಕಳಿಲ್ಲದ ಕಾರಣ ಮಂಜುನಾಥ್ ಅವರನ್ನು ದತ್ತು ಪಡೆದು ಸಾಕಿ ಸಲಹಿದ್ದರು. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಒಬ್ಬನೇ ಮಗ ಈಗ ಇಲ್ಲವಾಗಿರುವುದು ದಂಪತಿಯನ್ನು ತೀವ್ರ ಆಘಾತಕ್ಕೆ ದೂಡಿದೆ.
ನಿಗೂಢವಾಗಿ ಉಳಿದ ಸಾವಿನ ಕಾರಣ:
ಮಂಜುನಾಥ್ ಅವರು ಸಮಾಜದಲ್ಲಿ ಪರೋಪಕಾರಿ ಮತ್ತು ಸರಳ ಸ್ವಭಾವದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಎಲ್ಲರೊಂದಿಗೂ ಅನ್ಯೋನ್ಯವಾಗಿದ್ದ ಇವರು ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.