ಡೈಲಿವಾರ್ತೆ:04/ಏಪ್ರಿಲ್ /2026

ಸುಣ್ಣಾರಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ‘ಆಡೋಣ ಬಾ’ ಬೇಸಿಗೆ ಕ್ರೀಡಾ ಶಿಬಿರಕ್ಕೆ ಚಾಲನೆ: ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ – ರಾಷ್ಟ್ರೀಯ ಆಟಗಾರ ನವೀನ್ ಕಾಂಚನ್

​ಕುಂದಾಪುರ: ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಉತ್ತಮ ಅವಕಾಶಗಳಿವೆ. ರಾಜ್ಯ ಸರ್ಕಾರದಲ್ಲಿ ಶೇ. 2ರಷ್ಟು ಹಾಗೂ ಪೊಲೀಸ್ ಇಲಾಖೆಯಲ್ಲಿ ಶೇ. 3ರಷ್ಟು ಮೀಸಲಾತಿ ಇರುವುದು ಕ್ರೀಡಾಪಟುಗಳಿಗೆ ವರವಾಗಿದೆ ಎಂದು ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಹಾಗೂ ಪೊಲೀಸ್ ಅಧಿಕಾರಿ ನವೀನ್ ಕಾಂಚನ್ ಹೇಳಿದರು.

​ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾದ ‘ಆಡೋಣ ಬಾ’ 15 ದಿನಗಳ ಉಚಿತ ಬೇಸಿಗೆ ಕ್ರೀಡಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರತಿಭೆಗಳು ಇಂತಹ ಶಿಬಿರಗಳ ಸದುಪಯೋಗ ಪಡೆದು ರಾಷ್ಟ್ರ ಮಟ್ಟಕ್ಕೆ ಬೆಳೆಯಬೇಕು ಎಂದು ಅವರು ಹಾರೈಸಿದರು.

​ಆರೋಗ್ಯ ಮತ್ತು ಶಿಕ್ಷಣ: ಎಂ. ಮಹೇಶ್ ಹೆಗ್ಡೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಎಂ. ಹೆಗ್ಡೆ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಶ್ರೀ ಎಂ. ಮಹೇಶ್ ಹೆಗ್ಡೆ ಮಾತನಾಡಿ, “ಸದೃಢ ದೇಹದಲ್ಲಿ ಮಾತ್ರ ಸದೃಢ ಶಿಕ್ಷಣ ಸಾಧ್ಯ. ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಬೇಕು. ನಮ್ಮ ಸಂಸ್ಥೆಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿ, ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ಎರಡು ಎಕರೆ ಜಾಗದಲ್ಲಿ ಹೈಟೆಕ್ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ,” ಎಂದರು. ಅಲ್ಲದೆ, ಎಸ್‌ಎಸ್‌ಎಲ್‌ಸಿಯಲ್ಲಿ 500ಕ್ಕೂ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದರು.

ಮೈದಾನದಲ್ಲಿ ಬೆವರಿಸಿದರೆ ಆಸ್ಪತ್ರೆಯ ಕ್ಯೂ ತಪ್ಪಿಸಬಹುದು: ಜೀವನ್ ಕುಮಾರ್ ಶೆಟ್ಟಿ

ಮುಖ್ಯ ಅತಿಥಿಯಾಗಿದ್ದ ನಾವುಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಜೀವನ್ ಕುಮಾರ್ ಶೆಟ್ಟಿ ಮಾತನಾಡಿ,
ಇಂದು ಹಳ್ಳಿ ಹಳ್ಳಿಗಳಲ್ಲೂ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳ ಮುಂದೆ ರೋಗಿಗಳ ಸಾಲು ಬೆಳೆಯುತ್ತಿದೆ. ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಬೇಕಿದೆ. ಎಲ್ಲಿಯವರೆಗೆ ಕ್ರೀಡಾ ಮೈದಾನದಲ್ಲಿ ಅಭ್ಯಾಸಕ್ಕಾಗಿ ಕ್ರೀಡಾಪಟುಗಳು ಸಾಲು ನಿಲ್ಲುವುದಿಲ್ಲವೋ, ಅಲ್ಲಿಯವರೆಗೆ ಆಸ್ಪತ್ರೆಗಳಲ್ಲಿ ಟೋಕನ್ ಪಡೆದು ಕಾಯುವುದು ತಪ್ಪುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಸಂಸ್ಥೆಯ ಚೇರ್ಮನ್ ಮಹೇಶ್ ಹೆಗ್ಡೆ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, “ಮಹೇಶ್ ಹೆಗ್ಡೆ ಅವರು ಕೇವಲ ಲಾಭದ ಉದ್ದೇಶದಿಂದ ಸಂಸ್ಥೆ ಕಟ್ಟದೆ, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಸಂಸ್ಕೃತಿಗೂ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ.
ದಿನದ 24 ಗಂಟೆಯಲ್ಲಿ ಕನಿಷ್ಠ ಒಂದೆರಡು ಗಂಟೆಯನ್ನಾದರೂ ಮೈದಾನದಲ್ಲಿ ಕಳೆಯಬೇಕು. ಆವಾಗ ಮಾತ್ರ ಬದುಕಿನಲ್ಲಿ ಶಿಸ್ತು ಮತ್ತು ಚೈತನ್ಯ ಮೂಡಲು ಸಾಧ್ಯ ಎಂದರು.

ಎಕ್ಸಲೆಂಟ್ ಸಂಸ್ಥೆ: ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ತ್ರಿವೇಣಿ ಸಂಗಮ – ಪ್ರಾಂಶುಪಾಲ ನಾಗರಾಜ್ ಶೆಟ್ಟಿ

ಪ್ರಾಂಶುಪಾಲ ನಾಗರಾಜ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯು ಕೇವಲ ನಾಲ್ಕು ಗೋಡೆಗಳ ಮಧ್ಯೆ ನೀಡುವ ಶಿಕ್ಷಣಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿರುವ ಕ್ರೀಡೆ ಮತ್ತು ಸಾಂಸ್ಕೃತಿಕ ಪ್ರತಿಭೆಯನ್ನು ಹೊರತರುವಲ್ಲಿ ಜಿಲ್ಲೆಗೆ ಮಾದರಿಯಾಗಿದೆ. ಅಲ್ಲದೆ ಸಂಸ್ಥೆಯ ಚೇರ್ಮನ್ ಎಂ. ಮಹೇಶ್ ಹೆಗ್ಡೆ ಅವರ ಕ್ರೀಡಾ ಆಸಕ್ತಿಯ ಫಲವಾಗಿ ಈ ಶಿಬಿರ ಮೂಡಿಬಂದಿದೆ. ಕಳೆದ ಸಾಲಿನಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಕರಾಟೆ, ವಾಲಿಬಾಲ್, ಶಾರ್ಟ್‌ಪುಟ್ ಹಾಗೂ ಫುಟ್‌ಬಾಲ್‌ನಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸಾಧನೆ ಮಾಡಿದ್ದಾರೆ. ಪ್ರಥಮ್ ಸಿಂಗ್, ಗಜೇಂದ್ರ ಮೂರ್ತಿ, ತನುಶ್ರೀ ಹಾಗೂ ಕೌಶಿಕ್ ರಾಜ್ಯಮಟ್ಟದಲ್ಲಿ ಮಿಂಚಿದ್ದಾರೆ ಎಂದು ಅವರ ಸಾಧನೆಗಳನ್ನು ಮೆಲುಕು ಹಾಕಿದ ಅವರು
ಕೇವಲ ಕ್ರೀಡೆ ಮಾತ್ರವಲ್ಲದೆ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿಯೂ ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸುವ ಮೂಲಕ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದೇ ಸಂಸ್ಥೆಯ ಮುಖ್ಯ ಉದ್ದೇಶ ಎಂದರು. ಈ ಉಚಿತ ಶಿಬಿರವು ಏಪ್ರಿಲ್ 18ರವರೆಗೆ ನಡೆಯಲಿದ್ದು, ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುತ್ತದೆ ಎಂದು ನಾಗರಾಜ್ ಶೆಟ್ಟಿ ಹೇಳಿದರು.

ವೇದಿಕೆಯಲ್ಲಿ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ದಿನಕರ ಹೆಗ್ಡೆ, ದೈಹಿಕ ಶಿಕ್ಷಕ ವಿಖ್ಯಾತ್ ಕಂಡ್ಲೂರು, ತರಬೇತುದಾರರಾದ ಸುದರ್ಶನ ಆಚಾರ್ಯ, ವಿಶಾಲ್ ಖಾರ್ವಿ, ಸಂದೇಶ್ ಜೋಗಿ, ಉದ್ಯಮಿ ಸದಾನಂದ ಶ್ಯಾನುಭಾಗ್ ಹಾಗೂ ಕ್ರೀಡಾಪಟುಗಳಾದ ಪವನ್ ಶೆಟ್ಟಿ ಮತ್ತು ಪ್ರತೀಕ್ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜಿನಿ ಪಿ ಆಚಾರ್ಯ ಸ್ವಾಗತಿಸಿ, ಅಧ್ಯಾಪಕ ರಶಿಕ್ ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕಿ ಶ್ರೀಮತಿ ವಿಶಾಲ ಶೆಟ್ಟಿ ವಂದಿಸಿದರು.