


ಡೈಲಿವಾರ್ತೆ:06/ಏಪ್ರಿಲ್ /2026

ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಯತ್ನ – ಮಣಿಪಾಲದಲ್ಲಿ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲು

ಮಣಿಪಾಲ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ ಜೆಇಇ ಮೈನ್ಸ್ ಪರೀಕ್ಷೆಯ ವೇಳೆ ಪ್ರಶ್ನೆಪತ್ರಿಕೆಯನ್ನು ಮೊಬೈಲ್ ಮೂಲಕ ಸೋರಿಕೆ ಮಾಡಲು ಯತ್ನಿಸಿದ ಘಟನೆ ಮಣಿಪಾಲದಲ್ಲಿ ಬೆಳಕಿಗೆ ಬಂದಿದೆ.
ಪಿರ್ಯಾದಿದಾರರಾದ ವಿ.ಕೆ. ಮನೋಹರ್ ಕುಮಾರ್ (53), ಸಹಾಯಕ ಪ್ರಾಂಶುಪಾಲರು, ಜವಹಾರ್ ನವೋದಯ ವಿದ್ಯಾಲಯ, ಚಾರ ಹೆಬ್ರಿ, ಕಾರ್ಕಳ ತಾಲೂಕು, ಇವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ದಿನಾಂಕ 05/04/2026 ರಂದು ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜಿನ ION ಡಿಜಿಟಲ್ ಝೋನ್, ಮಿಲ್ಕ್ ಡೈರಿ, ಮಣಿಪಾಲದಲ್ಲಿ ಜೆಇಇ ಮೈನ್ಸ್ ಪರೀಕ್ಷೆ ಎರಡು ಅವಧಿಗಳಲ್ಲಿ ನಡೆದಿದ್ದು, ಬೆಳಿಗ್ಗೆ 149 ಮತ್ತು ಮಧ್ಯಾಹ್ನ 133 ವಿದ್ಯಾರ್ಥಿಗಳು ಹಾಜರಾಗಿದ್ದರು. ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾದ ಪರೀಕ್ಷೆಯ ವೇಳೆ, ಉತ್ತರಾಖಂಡ ಮೂಲದ ವಿದ್ಯಾರ್ಥಿ ಅರೀದಮಾನ್ ಸಿಂಗ್ ಸಾಂಗ್ ಲ್ಯಾಬ್ ‘ಎ’ಯ ಸಿಸ್ಟಮ್ ಸಂಖ್ಯೆ C-018ರಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದನು.
ಈ ವೇಳೆ ಆತನು ತನ್ನ ಮೊಬೈಲ್ ಫೋನ್ ಬಳಸಿ ಕಂಪ್ಯೂಟರ್ ಪರದೆಯಲ್ಲಿದ್ದ ಪ್ರಶ್ನೆಪತ್ರಿಕೆಯ ಸಂಪೂರ್ಣ ಚಿತ್ರಗಳನ್ನು ತೆಗೆದು ಹೊರಗೆ ಕಳುಹಿಸಲು ಯತ್ನಿಸಿರುವುದು ಪತ್ತೆಯಾಗಿದೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 49/2026 ರಡಿ The Public Examinations (Prevention of Unfair Means) Act 2024ರ ಕಲಂ 03, 04, 10 ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.