ಡೈಲಿವಾರ್ತೆ:06/ಏಪ್ರಿಲ್ /2026

ಬ್ರಹ್ಮಾವರ: ನಾಗರಮಠ ಮರಳು ದಿಬ್ಬ ತೆರವು ವಿವಾದ: ಪ್ರತಿಭಟನೆಯ ಹಿಂದೆ ಮರಳು ಮಾಫಿಯಾದ ಹಿತಾಸಕ್ತಿ ಅಡಗಿದೆ – ಗುತ್ತಿಗೆದಾರರ ಗಂಭೀರ ಆರೋಪ

​ಬ್ರಹ್ಮಾವರ: ತಾಲೂಕಿನ ಹೊಸಳ ಸಮೀಪದ ನಾಗರಮಠದಲ್ಲಿ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವತಿಯಿಂದ ಅಧಿಕೃತವಾಗಿ ನಡೆಯುತ್ತಿರುವ ಮರಳುಗಾರಿಕೆ ಈಗ ಪರ-ವಿರೋಧದ ಚರ್ಚೆಗೆ ವೇದಿಕೆಯಾಗಿದೆ. ಮರಳು ಬ್ಲಾಕ್ ಸಂಖ್ಯೆ ಡಿಎಸ್‌ಬಿ-5 ರಲ್ಲಿ ಬಿ. ಕುಶಕುಮಾರ್ ಅವರಿಗೆ ಮರಳುಗಾರಿಕೆಗೆ ಗುತ್ತಿಗೆ ನೀಡಲಾಗಿದ್ದು, ಇದರ ವಿರುದ್ಧ ಸ್ಥಳೀಯ ಕೆಲವು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಈ ಪ್ರತಿಭಟನೆಯ ಹಿಂದೆ ಮರಳು ಮಾಫಿಯಾದ ಹಿತಾಸಕ್ತಿ ಅಡಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

​ದಿಬ್ಬ ತೆರವು ಅನಿವಾರ್ಯ ಏಕೆ?


​ಸ್ಥಳೀಯ ಪರಿಸ್ಥಿತಿಯನ್ನು ಗಮನಿಸಿದರೆ, ನದಿಯ ಮಧ್ಯಭಾಗದಲ್ಲಿ ಬೃಹತ್ ಮರಳು ದಿಬ್ಬ ನಿರ್ಮಾಣವಾಗಿದ್ದು, ಅದರಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಇದರಿಂದಾಗಿ ನದಿಯ ನೈಸರ್ಗಿಕ ಹರಿವು ಇಬ್ಬಾಗವಾಗಿ ಪಥ ಬದಲಾಗುತ್ತಿದೆ.
​ನದಿ ದಂಡೆಗಳು ಕೊಚ್ಚಿ ಹೋಗುತ್ತಿದ್ದು, ಕೃಷಿ ಭೂಮಿಗೆ ಹಾನಿಯಾಗುತ್ತಿದೆ.

ಮಳೆಗಾಲದಲ್ಲಿ ಹೂಳು ಮತ್ತು ದಿಬ್ಬದ ಕಾರಣದಿಂದಾಗಿ ತೆಕ್ಕಟ್ಟೆ, ಚಿತ್ರಪಾಡಿ, ಬನ್ನಾಡಿ ಸೇರಿದಂತೆ ಸುತ್ತಮುತ್ತಲ ಕೃಷಿ ಭೂಮಿಗೆ ನೆರೆ ನೀರು ನುಗ್ಗುವ ಭೀತಿ ಇದೆ. ಹೀಗಾಗಿ, ನದಿಯ ಸರಾಗ ಹರಿವಿಗಾಗಿ ಮತ್ತು ಸಿಹಿ ನೀರಿನ ಶೇಖರಣೆ ಹೆಚ್ಚಿಸಲು ಈ ದಿಬ್ಬ ತೆರವುಗೊಳಿಸುವುದು ವೈಜ್ಞಾನಿಕವಾಗಿ ಅಗತ್ಯ ಎಂಬುದು ತಜ್ಞರ ಹಾಗೂ ಕೆಲ ಸ್ಥಳೀಯರ ಅಭಿಪ್ರಾಯ.

​ಗುತ್ತಿಗೆದಾರರ ಗಂಭೀರ ಆರೋಪ: “ಬೇಡಿಕೆಗೆ ಒಪ್ಪದಿದ್ದಕ್ಕೆ ಪ್ರತಿಭಟನೆ”

ಟೆಂಡರ್ ಪಡೆದಿರುವ ಕುಶಕುಮಾರ್ ಬನ್ನಾಡಿ ಅವರು ಪತ್ರಿಕೆಯೊಂದಿಗೆ ಮಾತನಾಡಿ, “ನಾನು ಅಧಿಕೃತವಾಗಿ ಸರಕಾರದ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಗುತ್ತಿಗೆ ಪಡೆದಿದ್ದೇನೆ. ಆದರೆ ನಾನು ಕೆಲಸ ಆರಂಭಿಸಿದ ಎರಡನೇ ದಿನವೇ, ಈ ಹಿಂದೆ ಇಲ್ಲಿ ಅನಧಿಕೃತವಾಗಿ ಮರಳು ತೆಗೆಯುತ್ತಿದ್ದ ವ್ಯಕ್ತಿಯೊಬ್ಬರು ಬಂದು ಹಣಕ್ಕೆ ಬೇಡಿಕೆಯಿಟ್ಟಿದ್ದರು. ಅವರ ಅಕ್ರಮ ಬೇಡಿಕೆಗೆ ನಾನು ಒಪ್ಪದ ಕಾರಣ, ಈಗ ಅಮಾಯಕ ಮಹಿಳೆಯರನ್ನು ಮತ್ತು ಮಕ್ಕಳನ್ನು ಮುಂದೆ ಬಿಟ್ಟು ಪ್ರತಿಭಟನೆ ಮಾಡಿಸುತ್ತಿದ್ದಾರೆ,” ಎಂದು ದೂರಿದ್ದಾರೆ.
​ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಅಕ್ರಮಕ್ಕೆ ಅವಕಾಶವಿಲ್ಲದ ಕಾರಣ ಹತಾಶೆಗೊಂಡವರು ಈ ರೀತಿ ಸಂಚು ರೂಪಿಸುತ್ತಿದ್ದಾರೆ ಎಂಬುದು ಅವರ ವಾದ.

​ಸ್ಥಳೀಯ ನಿವಾಸಿಗಳಾದ ಪ್ರವೀಣ್ ಮತ್ತು ವಿನಯ ಶೆಟ್ಟಿ ಅವರು ಮರಳುಗಾರಿಕೆಯನ್ನು ಬೆಂಬಲಿಸಿ ಮಾತನಾಡಿ ಪ್ರತಿಭಟನೆ ಮಾಡುತ್ತಿರುವವರಲ್ಲಿ ಯಾರಿಗೂ ಇಲ್ಲಿ ಕೃಷಿ ಭೂಮಿಯಿಲ್ಲ. ಅವರ ಬಳಿ ಆರ್‌ಟಿಸಿ ಇದ್ದರೆ ತೋರಿಸಲಿ. ಮರಳು ದಿಬ್ಬ ತೆರವಾದರೆ ಕೃಷಿಕರಿಗೆ ಅನುಕೂಲವಾಗಲಿದೆಯೇ ಹೊರತು ತೊಂದರೆಯಿಲ್ಲ. ಜಿಲ್ಲೆಯಲ್ಲಿ ಮರಳಿನ ಕೊರತೆಯಿಂದಾಗಿ ಈಗಾಗಲೇ ಆರ್ಥಿಕತೆ ಕುಸಿದಿದೆ, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಜಿಲ್ಲಾಡಳಿತದ ಕ್ರಮ ಸರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸ್ ಭದ್ರತೆಯಲ್ಲಿ ಮರಳುಗಾರಿಕೆ
​ವಿವಾದದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತವು ಸ್ಥಳದಲ್ಲಿ ಮೂರು ಪೊಲೀಸ್ ವಾಹನಗಳನ್ನು ನಿಯೋಜಿಸಿ ಭದ್ರತೆ ನೀಡಿದೆ. ಮಳೆಗಾಲ ಸಮೀಪಿಸುತ್ತಿರುವುದರಿಂದ ಮರಳಿನ ಅಭಾವ ತಪ್ಪಿಸಲು ಕಾನೂನುಬದ್ಧವಾಗಿ ಮರಳು ತೆಗೆಯಲು ಜಿಲ್ಲಾಡಳಿತ ಮುಂದಾಗಿದೆ.