


ಡೈಲಿವಾರ್ತೆ:07/ಏಪ್ರಿಲ್ /2026

ಉಪ್ಪುಂದ ಸಹಕಾರ ಸಂಘದಲ್ಲಿ ₹80 ಲಕ್ಷಕ್ಕೂ ಅಧಿಕ ದುರ್ಬಳಕೆ ಆರೋಪ: ಮಾಜಿ ಸಿಇಒ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲು

ಬೈಂದೂರು: ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘ (ನಿ), ಉಪ್ಪುಂದದಲ್ಲಿ ಕೋಟ್ಯಾಂತರ ರೂಪಾಯಿ ಹಣ ದುರುಪಯೋಗ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಸಂಘದ ಮಾಜಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಪ್ರಧಾನ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹಣಕಾಸು ಅಕ್ರಮದ ಆರೋಪಗಳು ಗಂಭೀರವಾಗಿವೆ.
ಪಿರ್ಯಾದಿದಾರರಾದ ಶ್ರೀನಿವಾಸ ಕೆ (35), ಅವರು ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 2023-2024ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಅಕ್ರಮ ಬೆಳಕಿಗೆ ಬಂದಿರುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಸುಭಾಶ್ಚಂದ್ರ (39), ನಾವುಂದ ಗ್ರಾಮದವರು ಹಾಗೂ ಪ್ರಧಾನ ವ್ಯವಸ್ಥಾಪಕರಾಗಿದ್ದ ದೀಪಕ್ ಕುಮಾರ್ (35), ಮರವಂತೆ ಗ್ರಾಮದವರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಒಟ್ಟು ₹80,91,996 ಹಣವನ್ನು ಸ್ವಂತಕ್ಕೆ ದುರುಪಯೋಗಪಡಿಸಿಕೊಂಡು ಸಂಘಕ್ಕೆ ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.
ಈ ಸಂಬಂಧ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನ ಮೇರೆಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2026 ಅಡಿಯಲ್ಲಿ ಹಲವು ವಿಧಿ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.