



ಡೈಲಿವಾರ್ತೆ:07/ಏಪ್ರಿಲ್ /2026

ಇರಾನ್-ಅಮೆರಿಕ ಸಂಘರ್ಷ: ಟ್ರಂಪ್ ಗಡುವಿನ ಬೆನ್ನಲ್ಲೇ ‘ಮಾನವ ಗುರಾಣಿ’ ಮೊರೆ ಹೋದ ಟೆಹ್ರಾನ್!

ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರಣಿ ಎಚ್ಚರಿಕೆ ಹಾಗೂ ಕದನ ವಿರಾಮ ಒಪ್ಪಂದಕ್ಕೆ ನೀಡಿದ್ದ ಗಡುವು ಮಂಗಳವಾರಕ್ಕೆ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಇರಾನ್ ಹಾಗೂ ಅಮೆರಿಕ ನಡುವಿನ ಸಂಘರ್ಷ ತುತ್ತತುದಿಗೆ ತಲುಪಿದೆ.
ಅಮೆರಿಕದ ಸಂಭಾವ್ಯ ವೈಮಾನಿಕ ದಾಳಿಯನ್ನು ತಡೆಯಲು ಇರಾನ್ ಈಗ ತನ್ನ ದೇಶದ ಯುವಶಕ್ತಿಯನ್ನು ‘ಮಾನವ ಸರಪಳಿ’ಯನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ.
ವಿದ್ಯುತ್ ಸ್ಥಾವರಗಳ ಸುತ್ತ ಯುವ ಸಮೂಹದ ಕಾವಲು ತಮ್ಮ ಕದನ ವಿರಾಮದ ಷರತ್ತುಗಳಿಗೆ ಒಪ್ಪದಿದ್ದರೆ ಇರಾನ್‌ನ ಇಂಧನ ಮೂಲಸೌಕರ್ಯಗಳನ್ನು ನಾಶಪಡಿಸುವುದಾಗಿ ಟ್ರಂಪ್ ನೀಡಿರುವ ಬೆದರಿಕೆಯನ್ನು ಎದುರಿಸಲು ಇರಾನ್ ಸರ್ಕಾರ ವಿಭಿನ್ನ ತಂತ್ರ ರೂಪಿಸಿದೆ.
ದೇಶದ ಪ್ರಮುಖ ವಿದ್ಯುತ್ ಸ್ಥಾವರಗಳು ಮತ್ತು ತೈಲ ಕೇಂದ್ರಗಳ ಸುತ್ತಲೂ ಮಂಗಳವಾರ ಮಧ್ಯಾಹ್ನ 2 ಗಂಟೆಯಿಂದ ‘ಮಾನವ ಸರಪಳಿ’ ನಿರ್ಮಿಸುವಂತೆ ಇರಾನ್‌ನ ಯುವ ಮತ್ತು ಕ್ರೀಡಾ ಸಚಿವಾಲಯ ಕರೆ ನೀಡಿದೆ.
ಅಭಿಯಾನದ ಘೋಷವಾಕ್ಯ: ಉಜ್ವಲ ಭವಿಷ್ಯಕ್ಕಾಗಿ ಇರಾನ್ ಯುವಕರ ಮಾನವ ಸರಪಳಿಯಲ್ಲಿ ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಕಲಾವಿದರು ಮತ್ತು ವಿವಿಧ ಯುವ ಸಂಘಟನೆಗಳ ಸದಸ್ಯರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದು ದೇಶದ ಏಕತೆ ಮತ್ತು ದೃಢನಿಶ್ಚಯದ ಸಂಕೇತ. ಯುವಜನತೆಯೇ ಸ್ವಯಂಪ್ರೇರಿತರಾಗಿ ಈ ಪ್ರಸ್ತಾಪವನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಟ್ರಂಪ್ ನೀಡಿದ ‘ಡೆಡ್‌ಲೈನ್’ ಮತ್ತು ಎಚ್ಚರಿಕೆ:
ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದು ಹಾಗೂ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಲು ಇರಾನ್‌ಗೆ ಮಂಗಳವಾರದವರೆಗೂ ಕಾಲಾವಕಾಶ ನೀಡಲಾಗಿತ್ತು. ಅಮೆರಿಕವು ಒಂದೇ ರಾತ್ರಿಯಲ್ಲಿ ಇಡೀ ಇರಾನ್ ಅನ್ನು ಸರ್ವನಾಶ ಮಾಡುವ ಸಾಮರ್ಥ್ಯ ಹೊಂದಿದೆ, ಆ ರಾತ್ರಿ ಮಂಗಳವಾರವೇ ಆಗಿರಬಹುದು ಎಂಬ ಟ್ರಂಪ್ ಅವರ ಕಠಿಣ ಮಾತುಗಳು ಜಾಗತಿಕ ಮಟ್ಟದಲ್ಲಿ ಆತಂಕ ಸೃಷ್ಟಿಸಿವೆ.
ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಆಯಕಟ್ಟಿನ ಸೇತುವೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಅಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಅಮೆರಿಕಕ್ಕೆ ನೈತಿಕ ಮತ್ತು ರಾಜತಾಂತ್ರಿಕ ಒತ್ತಡ ಹೇರುವುದು ಇರಾನ್‌ನ ಉದ್ದೇಶವಾಗಿದೆ.
ಒಂದೆಡೆ ಇಸ್ರೇಲ್ ಈಗಾಗಲೇ ಇರಾನ್ ಮೇಲೆ ಕ್ಷಿಪಣಿ ಮಳೆಗರೆದು ಹಲವು ಸ್ಫೋಟಗಳಿಗೆ ಕಾರಣವಾಗಿದೆ. ಇನ್ನೊಂದೆಡೆ ಅಮೆರಿಕದ ನೇರ ಸೇನಾ ಕ್ರಮದ ಭೀತಿ ಎದುರಾಗಿದೆ. ಇರಾನ್‌ನ ಈ ‘ಮಾನವ ಗುರಾಣಿ’ ತಂತ್ರವು ಅಮೆರಿಕದ ದಾಳಿಯನ್ನು ತಡೆಯುತ್ತದೆಯೇ ಅಥವಾ ಸಂಘರ್ಷವನ್ನು ಮತ್ತಷ್ಟು ಭೀಕರಗೊಳಿಸುತ್ತದೆಯೇ ಎಂಬುದನ್ನು ಇಡೀ ಜಗತ್ತು ಉಸಿರು ಬಿಗಿಹಿಡಿದು ನೋಡುತ್ತಿದೆ.