


ಡೈಲಿವಾರ್ತೆ:08/ಏಪ್ರಿಲ್ /2026

ಇರಾನ್ ಮೇಲಿನ ‘ಮಹಾ ದಾಳಿ’ ಸದ್ಯಕ್ಕೆ ಸ್ಥಗಿತ: ಪಾಕ್ ಮಧ್ಯಸ್ಥಿಕೆಗೆ ಮಣಿದ ಅಮೆರಿಕ – ಇರಾನ್ ಜೊತೆ ಎರಡು ವಾರಗಳ ಕದನ ವಿರಾಮಕ್ಕೆ ಟ್ರಂಪ್ ಸಮ್ಮತಿ

ವಾಷಿಂಗ್ಟನ್/ಟೆಹ್ರಾನ್: ಇಡೀ ಜಗತ್ತು ಉಸಿರು ಬಿಗಿಹಿಡಿದು ಕಾಯುತ್ತಿದ್ದ ಆ ಭೀಕರ ಯುದ್ಧದ ಕ್ಷಣಗಳು ಕೊನೆಗೂ ತಿಳಿಯಾದ ಹಾದಿ ಹಿಡಿದಿವೆ. ಇರಾನ್ ಮೇಲೆ ವಿನಾಶಕಾರಿ ಬಾಂಬ್ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಗಡುವು ಮುಗಿಯಲು ಕೇವಲ ಎರಡು ಗಂಟೆಗಳಿರುವಾಗ ನಡೆದ ನಾಟಕೀಯ ರಾಜತಾಂತ್ರಿಕ ಬೆಳವಣಿಗೆಯೊಂದು ಸಂಭಾವ್ಯ ಮಹಾಯುದ್ಧವನ್ನು ತಪ್ಪಿಸಿದೆ.
ಪಾಕ್ ಪ್ರಧಾನಿ ಹಾಗೂ ಸೇನಾ ಮುಖ್ಯಸ್ಥರ ಮನವಿಗೆ ಸ್ಪಂದನೆ:
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ತುರ್ತು ಮನವಿಗೆ ಸ್ಪಂದಿಸಿರುವ ಟ್ರಂಪ್, ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಕಾಲ ಅಮಾನತುಗೊಳಿಸುವುದಾಗಿ ಘೋಷಿಸಿದ್ದಾರೆ. “ಇರಾನ್ ತನ್ನ ಹಠಮಾರಿ ಧೋರಣೆ ಬಿಟ್ಟು ಶಾಂತಿಗೆ ಮುಂದಾಗಿರುವುದು ಸ್ವಾಗತಾರ್ಹ” ಎಂದು ಟ್ರಂಪ್ ತಿಳಿಸಿದ್ದಾರೆ.
ಹಾರ್ಮುಜ್ ಜಲಸಂಧಿ ಮುಕ್ತ: ಜಾಗತಿಕ ನಿಟ್ಟುಸಿರು
ಕಳೆದ ಐದು ವಾರಗಳಿಂದ ಇರಾನ್ ದಿಗ್ಬಂಧನ ಹಾಕಿದ್ದ ವಿಶ್ವದ ಅತ್ಯಂತ ಪ್ರಮುಖ ತೈಲ ಮಾರ್ಗ ‘ಹಾರ್ಮುಜ್ ಜಲಸಂಧಿ’ (Strait of Hormuz) ಯನ್ನು ತಕ್ಷಣವೇ ಮತ್ತು ಸುರಕ್ಷಿತವಾಗಿ ತೆರೆಯಲು ಇರಾನ್ ಒಪ್ಪಿಕೊಂಡಿದೆ. ಇದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಿದ್ದ ಅಭದ್ರತೆಯನ್ನು ದೂರ ಮಾಡಿದೆ. ಈ ಹಿಂದೆ ಇರಾನ್‌ನ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ನೀಡಿದ್ದ ಎಚ್ಚರಿಕೆಯು ವಿಶ್ವಸಂಸ್ಥೆ ಮತ್ತು ವ್ಯಾಟಿಕನ್ ಸಿಟಿಯ ಆತಂಕಕ್ಕೆ ಕಾರಣವಾಗಿತ್ತು.
ಇರಾನ್ ಮಂಡಿಸಿದ ‘10 ಅಂಶಗಳ ಶಾಂತಿ ಸೂತ್ರ’
ಯುದ್ಧವನ್ನು ಶಾಶ್ವತವಾಗಿ ಅಂತ್ಯಗೊಳಿಸಲು ಇರಾನ್ ಅಮೆರಿಕದ ಮುಂದೆ ಹತ್ತು ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ. ಈ ಪ್ರಸ್ತಾವನೆಯು ಮುಂದಿನ ಶಾಂತಿ ಮಾತುಕತೆಗೆ ಪ್ರಬಲ ಅಡಿಪಾಯವಾಗಿದೆ ಎಂದು ಅಮೆರಿಕ ಪರಿಗಣಿಸಿದೆ.
ಪ್ರಮುಖ 10 ಬೇಡಿಕೆಗಳು:
- ಆಕ್ರಮಣಶೀಲತೆ ಮಾಡದಿರುವ ವಿಚಶರದಲ್ಲಿ ಬದ್ಧತೆ
- ಹೊರ್ಮುಝ್ ಮೇಲೆ ಇರಾನ್ ನಿಯಂತ್ರಣ ಮುಂದುವರಿಕೆ
- ಯುರೇನಿಯಂ ಪುಷ್ಟೀಕರಣದ ಸ್ವೀಕಾರ
- ಎಲ್ಲಾ ಪ್ರಾಥಮಿಕ & ದ್ವಿತೀಯ ನಿರ್ಬಂಧ ತೆರವು
- UN ಭದ್ರತಾ ಮಂಡಳಿ & IEAE ಆಡಳಿತ ಮಂಡಳಿಯ ನಿರ್ಣಯ ರದ್ದು
- ಜಲಸಂಧಿ ಆದಾಯ ಮೂಲಸೌಕರ್ಯಕ್ಕೆ ಪುನರ್ನಿರ್ಮಾಣಕ್ಕೆ ಬಳಕೆ
- ಇರಾನ್‌ಗೆ ಪರಿಹಾರ ಪಾವತಿಗಳು
- ಅಮೆರಿಕ ಯುದ್ಧ ಪಡೆಗಳನ್ನ ಹಿಂತೆಗೆದುಕೊಳ್ಳುವುದು
- ಎಲ್ಲಾ ರಂಗಗಳಲ್ಲಿ ಯುದ್ಧವನ್ನ ನಿಲ್ಲಿಸುವುದು
10.ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಿಲ್ಲಿಸಬೇಕು.
ಟ್ರಂಪ್ ಹೇಳಿಕೆಯ ಸಾರಾಂಶ:
ಪಾಕಿಸ್ತಾನದ ನಾಯಕರ ವಿನಂತಿಯ ಮೇರೆಗೆ ಮತ್ತು ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಒಪ್ಪಿರುವ ಹಿನ್ನೆಲೆಯಲ್ಲಿ, ನಾವು ಬಾಂಬ್ ದಾಳಿಯ ನಿರ್ಧಾರವನ್ನು 14 ದಿನಗಳ ಕಾಲ ತಡೆಹಿಡಿದಿದ್ದೇವೆ. ನಾವು ಈಗಾಗಲೇ ನಮ್ಮ ಮಿಲಿಟರಿ ಗುರಿಗಳನ್ನು ತಲುಪಿದ್ದೇವೆ. ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು ಇದು ಸಕಾಲ ಎಂದು ಅಮೆರಿಕ ಅಧ್ಯಕ್ಷರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಈ ಮಹತ್ವದ ಕದನ ವಿರಾಮಕ್ಕೆ ಇಸ್ರೇಲ್ ಕೂಡ ಬೆಂಬಲ ಸೂಚಿಸಿರುವುದು ಈ ಬಿಕ್ಕಟ್ಟು ಶಮನವಾಗುವ ವಿಶ್ವಾಸವನ್ನು ಹೆಚ್ಚಿಸಿದೆ. ಮುಂದಿನ ಎರಡು ವಾರಗಳು ಪಶ್ಚಿಮ ಏಷ್ಯಾದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವೆನಿಸಿವೆ.