ಡೈಲಿವಾರ್ತೆ:08/ಏಪ್ರಿಲ್ /2026

ಕನ್ನಡ ವಿರೋಧಿ ರಾಜ್ಯಪಾಲರ ವಿರುದ್ಧ ಕರವೇ ಆಕ್ರೋಶ: ಹಿಂದಿ ಹೇರಿಕೆ ಯತ್ನ – ತಕ್ಷಣ ವಜಾಗೊಳಿಸಿ

ಉಡುಪಿ, ಏಪ್ರಿಲ್ 7: ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ನಡೆದುಕೊಳ್ಳುತ್ತಿದ್ದು, ರಾಜ್ಯದ ಹಿತಾಸಕ್ತಿಗೆ ವಿರುದ್ಧ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ, ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕೆಂದು ಉಡುಪಿ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಆಗ್ರಹಿಸಿದೆ.

ಎಸ್ಎಸ್ಎಲ್ಸಿ ಪರೀಕ್ಷೆಯ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದ ರಾಜ್ಯ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರವನ್ನು ಖಂಡಿಸಿ, ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಧರಣಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಅ.ರಾ. ಪ್ರಭಾಕರ್ ಪೂಜಾರಿ ಮಾತನಾಡಿದರು.

ರಾಜ್ಯಪಾಲರ ಈ ಕ್ರಮದ ಹಿಂದೆ ಕರ್ನಾಟಕದಲ್ಲಿ ಹಿಂದಿ ಭಾಷೆಯನ್ನು ಶಾಶ್ವತವಾಗಿ ಹೇರಲು ಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಅನಾಮಧೇಯ ಸಂಘಟನೆಯ ಮನವಿಗೆ ಸ್ಪಂದಿಸಿ ರಾಜ್ಯಪಾಲರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ನಡೆದುಕೊಂಡಿದ್ದಾರೆ. ಕನ್ನಡಿಗರ ಆಶಯಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರಿಂದ ಆಯ್ಕೆಯಾದ ರಾಜ್ಯ ಸರ್ಕಾರವೇ ಶಿಕ್ಷಣ ನೀತಿಯನ್ನು ನಿರ್ಧರಿಸುವ ಹಕ್ಕು ಹೊಂದಿದ್ದು, ಅದನ್ನು ಪ್ರಶ್ನಿಸಲು ರಾಜ್ಯಪಾಲರಿಗೆ ಅಧಿಕಾರವಿಲ್ಲ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ತಕ್ಷಣ ವಜಾಗೊಳಿಸಬೇಕೆಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಲಾಯಿತು.

ಧರಣಿಯಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಬಸ್ರೂರು, ಉಪಾಧ್ಯಕ್ಷ ಶಹಾಬುದ್ದೀನ್, ನಗರ ಅಧ್ಯಕ್ಷ ಅಜರುದ್ಧೀನ್, ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ಪುರುಷೋತ್ತಮ ಪೂಜಾರಿ, ಉಡುಪಿ ಜಿಲ್ಲಾ ಮಹಿಳಾ ಘಟಕದ ಪ್ರಮುಖರಾದ ಅಶ್ವಿನಿ ನಾಯಕ್, ಅನೂಷಾ ಆಚಾರ್, ಗೀತಾ ಪೂಜಾರಿ, ಸುನಂದಾ ಕೋಟ್ಯಾನ್, ಜಿಲ್ಲಾ ಸಂಚಾಲಕ ಕೃಷ್ಣ ಪಾಂಗಾಳ, ಗೋಪಾಲ್ ದೊರೆ, ಅಯ್ಯಪ್ಪ, ಮಹೇಶ್ ಬಿ. ಎಚ್, ರಾಗು ಪೂಜಾರಿ, ಸುಕುಮಾರ್ ಶೆಟ್ಟಿ, ಅಕ್ಷತ್, ಕಾರ್ಕಳ ತಾಲೂಕು ಉಪಾಧ್ಯಕ್ಷ ಮುಬಿನ್ ಮೊದಲಾದವರು ಉಪಸ್ಥಿತರಿದ್ದರು.