ಡೈಲಿವಾರ್ತೆ:10/ಏಪ್ರಿಲ್ /2026

ಈ-ಖಾತೆಗಾಗಿ 1 ಲಕ್ಷ ಲಂಚ ಪಡೆಯುತ್ತಿದ್ದ ಪ.ಪಂ. ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ: ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಹಿಡಿದ ಅಧಿಕಾರಿಗಳು!

​ರಾಯಚೂರು: ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ ಅವರು ಈ-ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

​ಘಟನೆಯ ವಿವರ:
ರಾಘವೇಂದ್ರ ರೆಡ್ಡಿ ಎಂಬುವವರಿಗೆ ಈ-ಖಾತೆ ಮಾಡಿಕೊಡಲು ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ ಒಟ್ಟು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಅದರಂತೆ ಮೊದಲ ಕಂತಿನ ರೂಪದಲ್ಲಿ ಇಂದು 1 ಲಕ್ಷ ರೂಪಾಯಿ ಹಣವನ್ನು ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಎಚ್ಚೆತ್ತ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಸಿರವಾರದಿಂದ ಕವಿತಾಳ ಪಟ್ಟಣದ ಕಡೆಗೆ ತನ್ನ ಕಾರಿನಲ್ಲಿ ವೇಗವಾಗಿ ನುಗ್ಗಿದ ಅಧಿಕಾರಿಯನ್ನು ಲೋಕಾಯುಕ್ತ ತಂಡ ಬೆನ್ನಟ್ಟಿದೆ. ಸುಮಾರು ದೂರದವರೆಗೆ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ ಅಧಿಕಾರಿಗಳು, ಅಂತಿಮವಾಗಿ ಮುಖ್ಯಾಧಿಕಾರಿಯನ್ನು ತಡೆದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ವಶಕ್ಕೆ ಪಡೆದಿರುವ ಅಧಿಕಾರಿಯನ್ನು ಕವಿತಾಳ ಪ್ರವಾಸಿ ಮಂದಿರಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಪಂಚನಾಮೆ ಹಾಗೂ ವಿಚಾರಣೆ ಪ್ರಕ್ರಿಯೆಗಳು ನಡೆಯುತ್ತಿವೆ.
​ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಪುರುಷೋತ್ತಮ್, ಸಿಬ್ಬಂದಿಗಳಾದ ವಿಜಯಕುಮಾರ್ ಹಾಗೂ ಅಮರೇಶ್ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಘಟನೆಯು ಜಿಲ್ಲೆಯಾದ್ಯಂತ ಭ್ರಷ್ಟ ಅಧಿಕಾರಿಗಳ ವಲಯದಲ್ಲಿ ನಡುಕ ಹುಟ್ಟಿಸಿದೆ.