ಡೈಲಿವಾರ್ತೆ:09/ಏಪ್ರಿಲ್ /2026

ಹುಲಿಕಲ್‌ ಘಾಟಿಯಲ್ಲಿ ಭೀಕರ ದುರಂತ: ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರ ಸಾವು

​ಹೊಸನಗರ: ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಸಂಪರ್ಕ ಕೊಂಡಿಯಾದ ಹುಲಿಕಲ್‌ ಘಾಟಿಯಲ್ಲಿ (ಬಾಳೆಬರೆ ಘಾಟ್) ಗುರುವಾರ ಸಂಜೆ ಸಂಭವಿಸಿದ ಮಣ್ಣು ಕುಸಿತದ ದುರಂತದಲ್ಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಇತರ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

​ಘಟನೆಯ ವಿವರ:
​ರಾಜ್ಯ ಹೆದ್ದಾರಿ 52ರಲ್ಲಿರುವ ಈ ಘಾಟಿಯ ಹೇರ್‌ಪಿನ್ ತಿರುವಿನಲ್ಲಿ ಈ ಹಿಂದೆ ಸಂಭವಿಸಿದ್ದ ಭೂಕುಸಿತದ ಹಿನ್ನೆಲೆಯಲ್ಲಿ, ಪ್ರಸ್ತುತ ಶಾಶ್ವತ ಬೃಹತ್ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಗುರುವಾರ ಸಂಜೆ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಮೇಲಿಂದ ಮಣ್ಣು ಜಾರಿ ಬಿದ್ದಿದೆ. ಬೃಹತ್ ಪ್ರಮಾಣದ ಮಣ್ಣಿನ ರಾಶಿಯಡಿ ಸಿಲುಕಿದ ಮೂವರು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

​ಮೃತರನ್ನು ಚಕ್ಕಾರು ಗ್ರಾಮದ ರಾಘು, ಹಾವೇರಿ ಜಿಲ್ಲೆಯ ನೆಲಗಲ್ಲು ಗ್ರಾಮದ ಶಬೀರ್, ಹಾವೇರಿ ಜಿಲ್ಲೆಯ ನೆಲಗಲ್ಲು ಗ್ರಾಮದ ರಾಜು ಎಂದು ಗುರುತಿಸಲಾಗಿದೆ.

​ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು, ನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಮಣ್ಣಿನಡಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲು ಮಂಗಳೂರಿನಿಂದ ಎಸ್‌ಡಿಆರ್‌ಎಫ್‌ (SDRF) ತಂಡವು ಆಗಮಿಸಿದೆ.
​ಗಾಯಗೊಂಡ ನಾಲ್ವರು ಕಾರ್ಮಿಕರನ್ನು ತುರ್ತು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಘಟನೆಯಿಂದಾಗಿ ಹುಲಿಕಲ್ ಘಾಟಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು.