ಡೈಲಿವಾರ್ತೆ:11/ಏಪ್ರಿಲ್ /2026

ವೈಭವ್ ‘ಸೂರ್ಯ’ ಶಿಕಾರಿಗೆ ಬೆಚ್ಚಿದ ಬೆಂಗಳೂರು: ದಾಖಲೆಗಳ ಅಬ್ಬರದೊಂದಿಗೆ ರಾಜಸ್ಥಾನಕ್ಕೆ ಸತತ 4ನೇ ಜಯ

​ಗುವಾಹಟಿ: ಹದಿನೈದರ ಹರೆಯದ ಪೋರ ವೈಭವ್ ಸೂರ್ಯವಂಶಿ ಸಿಡಿಸಿದ ಸಿಡಿಲಬ್ಬರದ ಅರ್ಧಶತಕ ಹಾಗೂ ಧ್ರುವ್ ಜುರೆಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಹಾಲಿ ಚಾಂಪಿಯನ್ ಆರ್​​ಸಿಬಿ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಶುಕ್ರವಾರ ಇಲ್ಲಿನ ಬರ್ಸಪರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ನೀಡಿದ್ದ 202 ರನ್‌ಗಳ ಬೃಹತ್ ಗುರಿಯನ್ನು ರಾಜಸ್ಥಾನ ಇನ್ನೂ 12 ಎಸೆತಗಳು ಬಾಕಿ ಇರುವಂತೆಯೇ ತಲುಪಿತು.

​ಹೇಜಲ್‌ವುಡ್‌ಗೆ ಸೂರ್ಯವಂಶಿ ಶಾಕ್!
​ಬೃಹತ್ ಮೊತ್ತ ಬೆನ್ನಟ್ಟಿದ ರಾಜಸ್ಥಾನಕ್ಕೆ ವೈಭವ್ ಸೂರ್ಯವಂಶಿ ಅಕ್ಷರಶಃ ಪವರ್‌ಫುಲ್ ಆರಂಭ ನೀಡಿದರು. ಆಸೀಸ್ ವೇಗಿ ಜೋಶ್ ಹೇಜಲ್‌ವುಡ್ ಅವರ ಒಂದೇ ಓವರ್‌ನಲ್ಲಿ 19 ರನ್ ಚಚ್ಚಿದ ವೈಭವ್, ಪವರ್‌ಪ್ಲೇ ಅವಧಿಯಲ್ಲೇ ತಂಡದ ಮೊತ್ತವನ್ನು 97ಕ್ಕೆ ಏರಿಸಿದರು. ಕೇವಲ 26 ಎಸೆತ ಎದುರಿಸಿದ ವೈಭವ್ 7 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 78 ರನ್ ಚಚ್ಚಿದರು. ಅವರಿಗೆ ಸಾಥ್ ನೀಡಿದ ಧ್ರುವ್ ಜುರೆಲ್ 43 ಎಸೆತಗಳಲ್ಲಿ ಅಜೇಯ 81 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

​ಒಂದೇ ಪಂದ್ಯದಲ್ಲಿ ವೈಭವ್ ಬರೆದ 4 ‘ವೈಭವದ’ ದಾಖಲೆಗಳು:

​ವೇಗದ ಸರದಾರ: ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ 15 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

​ಪವರ್‌ಪ್ಲೇ ಕಿಂಗ್: ಐಪಿಎಲ್ ಇತಿಹಾಸದಲ್ಲಿ ಪವರ್‌ಪ್ಲೇ ಅವಧಿಯಲ್ಲೇ 3 ಬಾರಿ ಅರ್ಧಶತಕ ಪೂರೈಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡರು.

​ಕಿರಿಯ ಸಾಧಕ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ (15 ವರ್ಷ) ಆಟಗಾರ ಎಂಬ ದಾಖಲೆ ಬರೆದರು.

​ಒಂದೇ ಸೀಸನ್ ಡಬಲ್: ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಎರಡು ಬಾರಿ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಭಾಜನರಾದರು.

​ಪಾಟೀದಾರ್ ಹೋರಾಟ ವ್ಯರ್ಥ
​ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್​​ಸಿಬಿ ಪರ ನಾಯಕ ರಜತ್ ಪಾಟೀದಾರ್ (40 ಎಸೆತಗಳಲ್ಲಿ 63 ರನ್) ಹಾಗೂ ಕೊನೆಯಲ್ಲಿ ವೆಂಕಟೇಶ್ ಅಯ್ಯರ್ (15 ಎಸೆತಗಳಲ್ಲಿ 29 ರನ್) ಅಬ್ಬರಿಸಿದ ಪರಿಣಾಮ ತಂಡ 201 ರನ್ ಕಲೆಹಾಕಿತ್ತು. ರಾಜಸ್ಥಾನ ಪರ ಕೊನೆಯಲ್ಲಿ ಜಡೇಜಾ 24 ರನ್ ಗಳಿಸಿ ಜುರೆಲ್‌ಗೆ ಉತ್ತಮ ಸಾಥ್ ನೀಡಿದರು.

​ಅಂಕಪಟ್ಟಿ ಸ್ಥಿತಿ: ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ 8 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಸೋತರೂ ಆರ್​​ಸಿಬಿ 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ ಮುಂದುವರಿದಿದೆ.