



ಡೈಲಿವಾರ್ತೆ:17/ಏಪ್ರಿಲ್ /2026

ಕಾಪು: ಲಾರಿಗೆ ಕಾರು ಡಿಕ್ಕಿ, ಚಾಲಕ ಸ್ಥಳದಲ್ಲೇ ಸಾವು – ಇಬ್ಬರಿಗೆ ಗಾಯ

ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಾಂಗಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿ, ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತ ಕಾರು ಚಾಲಕನನ್ನು ಶ್ರೇಯಸ್ ಆಚಾರ್ ಎಂದು ಗುರುತಿಸಲಾಗಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸಾಗುತ್ತಿದ್ದ ಕಿಯಾ ಕಾರು ತನ್ನ ಮುಂದೆ ನಿಧಾನವಾಗಿ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಶ್ರೇಯಸ್ ಆಚಾರ್ ಅವರು ವಾಹನದಲ್ಲೇ ಸಿಲುಕಿಕೊಂಡಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಶ್ರೇಯಸ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಡಾರ್ವಿನ್ ಮತ್ತು ಸೂರ್ಯ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಲಾರಿ ಚಾಲಕ ಮಂಜುನಾಥ ಗೌಡ ಅವರು ಮಂಗಳೂರು ಬಂದರ್‌ನಿಂದ ಕೋಕ್ ಲೋಡ್ ಮಾಡಿಕೊಂಡು ಕೊಪ್ಪಳದ ಗಿಣಿಗೇರಿಯ ಕಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಪಾಂಗಳ ಗ್ರಾಮದ ಏಕಮುಖ ಸಂಚಾರ ಮಾರ್ಗದಲ್ಲಿ ಲಾರಿ ನಿಧಾನವಾಗಿ ಸಾಗುತ್ತಿದ್ದು ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಘಟನೆ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕ ನೀಡಿದ ದೂರಿನ ಮೇರೆಗೆ ಅಪರಾಧ ಕ್ರಮಾಂಕ 48/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 281, 125(a), 106(1) ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.