ಡೈಲಿವಾರ್ತೆ:17/ಏಪ್ರಿಲ್ /2026

ಅಮಾಸೆಬೈಲು: ದಲಿತ ವ್ಯಕ್ತಿಯ ಜಾಗಕ್ಕೆ ನುಗ್ಗಿ ಮರ ಕಟಾವು – ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ, ದೂರು ದಾಖಲು

​ಅಮಾಸೆಬೈಲು: ತಾನು ಕೃಷಿ ಮಾಡಿಕೊಂಡಿದ್ದ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ, ಮರ ಕಡಿದದ್ದನ್ನು ಪ್ರಶ್ನಿಸಿದ ದಲಿತ ವ್ಯಕ್ತಿಯೊಬ್ಬರಿಗೆ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ ಘಟನೆ ಅಮಾಸೆಬೈಲು ಗ್ರಾಮದ ಬೊಳ್ಮನೆ ಭೂತ್ನಾಡಿಯಲ್ಲಿ ಸಂಭವಿಸಿದೆ.

ಬೊಳ್ಮನೆ ಭೂತ್ನಾಡಿ ನಿವಾಸಿ ಮಂಜ (52) ಎಂಬವರು ಅಮಾಸೆಬೈಲು ಗ್ರಾಮದ ಸರ್ವೆ ನಂಬ್ರ 115 ರಲ್ಲಿ ಸುಮಾರು 4.80 ಎಕರೆ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಇದರಲ್ಲಿ 0.09 ಎಕರೆ ಜಾಗ ಈಗಾಗಲೇ 94ಸಿ ಅಡಿಯಲ್ಲಿ ಮಂಜೂರಾಗಿದ್ದು, ಉಳಿದ ಜಾಗದ ಮಂಜೂರಾತಿ ಪ್ರಕ್ರಿಯೆ ಪ್ರಸ್ತುತ ಸರ್ಕಾರದ ಹಂತದಲ್ಲಿದೆ. ಈ ಜಾಗದ ಪಕ್ಕದಲ್ಲೇ ಆರೋಪಿ ರಾಮ ಶೆಟ್ಟಿಗಾರ್ ಎಂಬುವವರ ಭೂಮಿ ಇದೆ ಎನ್ನಲಾಗಿದೆ.
ದಿನಾಂಕ 14-04-2026 ರಂದು ಬೆಳಿಗ್ಗೆ ಆರೋಪಿ ರಾಮ ಶೆಟ್ಟಿಗಾರ್ ತನ್ನ ಕೆಲಸಗಾರರಾದ ಹರೀಶ ನಾಯ್ಕ ಮತ್ತು ರವಿ ಪೂಜಾರಿ ಅವರೊಂದಿಗೆ ಮಂಜ ಅವರ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಗಡಿ ಭಾಗದಲ್ಲಿದ್ದ ಬೆಲೆಬಾಳುವ ‘ಮತ್ತಿ’ ಮರವನ್ನು ಕಡಿಯಲಾರಂಭಿಸಿದಾಗ, ಸ್ಥಳಕ್ಕೆ ಬಂದ ಮಂಜ ಅವರು ಇದನ್ನು ತಡೆದಿದ್ದಾರೆ. ಈ ವೇಳೆ ಆರೋಪಿಗಳು ಮಂಜ ಅವರು ಪರಿಶಿಷ್ಟ ಜಾತಿಗೆ ಸೇರಿದವರೆಂದು ತಿಳಿದಿದ್ದರೂ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಅಲ್ಲದೆ ಇಲ್ಲೇ ಕೊಲೆ ಮಾಡಿ ಹೂತು ಹಾಕುತ್ತೇವೆ ಎಂದು ಘೋರವಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಂತ್ರಸ್ತ ಮಂಜ ನೀಡಿದ ದೂರಿನ ಮೇರೆಗೆ ಅಮಾಸೆಬೈಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆಯ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
​ದಾಖಲಾದ ಕಲಂಗಳು:
ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 09/2026, ಕಲಂ 329(3), 324(4), 352, 351(2) R/W 3(5) BNS ಮತ್ತು 3(1)(r)(s), 3(2)(v-a) ಅಟ್ರೋಸಿಟಿ ಆಕ್ಟ್‌ನಂತೆ ತನಿಖೆ ಮುಂದುವರಿದಿದೆ.