ಡೈಲಿವಾರ್ತೆ:17/ಏಪ್ರಿಲ್ /2026

ಧರ್ಮಸ್ಥಳ ಧರ್ಮಾಧಿಕಾರಿಗೆ ನ್ಯಾಯಾಲಯದ ನೋಟಿಸ್: ಸರ್ಕಾರಿ ಭೂಮಿ ಅತಿಕ್ರಮಣ ಆರೋಪ ಗಂಭೀರ ತಿರುವು

ಬೆಂಗಳೂರು, ಏಪ್ರಿಲ್ 17: ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಬೆಳ್ತಂಗಡಿ ಪೊಲೀಸ್ ನಿರೀಕ್ಷಕರಿಗೆ ನಿರ್ದೇಶನ ನೀಡಿರುವುದು ಪ್ರಕರಣಕ್ಕೆ ಗಂಭೀರ ತಿರುವು ನೀಡಿದೆ.

ನ್ಯಾಯಾಲಯವು ಫೆಬ್ರವರಿ 19 ಹಾಗೂ ಏಪ್ರಿಲ್ 2ರಂದು ಹೊರಡಿಸಿದ ಎರಡು ಪ್ರತ್ಯೇಕ ಆದೇಶಗಳ ಮೂಲಕ ಈ ನಿರ್ದೇಶನ ನೀಡಿದೆ. ಮೊದಲ ಪ್ರಕರಣವು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸರ್ವೆ ಸಂಖ್ಯೆ 96/1ರಲ್ಲಿ ಸುಮಾರು 83 ಸೆಂಟ್ಸ್ ಸರ್ಕಾರಿ ಭೂಮಿಯ ಅತಿಕ್ರಮಣಕ್ಕೆ ಸಂಬಂಧಿಸಿದ್ದು, ಅಲ್ಲಿ ರಬ್ಬರ್ ತೋಟ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಪ್ರಕರಣದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯನ್ನು ಎರಡನೇ ಪ್ರತಿವಾದಿಯಾಗಿ ಸೇರಿಸಲಾಗಿದೆ.

ಇನ್ನೊಂದು ಪ್ರಕರಣವು ಬೆಳ್ತಂಗಡಿ ಗ್ರಾಮದ ಸರ್ವೆ ಸಂಖ್ಯೆ 173/5ರಲ್ಲಿ 25 ಸೆಂಟ್ಸ್ ಭೂಮಿಯ ಅತಿಕ್ರಮಣಕ್ಕೆ ಸಂಬಂಧಿಸಿದ್ದು, ಅಲ್ಲಿ ಸಮುದಾಯ ಭವನವನ್ನು ಕೆಡವಿ ಆಂಫಿಥಿಯೇಟರ್ ನಿರ್ಮಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ಬೆಳ್ತಂಗಡಿ ಸಮಾಜ ಮಂದಿರ ಕಾರ್ಯದರ್ಶಿ ಎರಡನೇ ಪ್ರತಿವಾದಿಯಾಗಿದ್ದಾರೆ.

ಈ ಎರಡೂ ಪ್ರಕರಣಗಳು ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಸಲ್ಲಿಸಿದ ಪ್ರತ್ಯೇಕ ಅರ್ಜಿಗಳ ಆಧಾರದ ಮೇಲೆ ದಾಖಲಾಗಿದ್ದು, ಪ್ರತಿವಾದಿಗಳಿಗೆ ನ್ಯಾಯಾಲಯದ ಮುಂದೆ ಹಾಜರಾಗಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಅತಿಕ್ರಮಣದ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಬೆಳ್ತಂಗಡಿ ತಹಶೀಲ್ದಾರ್ ಅವರಿಗೆ ನ್ಯಾಯಾಲಯವು ಸ್ಪಷ್ಟ ನಿರ್ದೇಶನ ನೀಡಿದ್ದು, ಅತಿಕ್ರಮಣ ಕಂಡುಬಂದಲ್ಲಿ ಅದರ ಸ್ವರೂಪ ಹಾಗೂ ವ್ಯಾಪ್ತಿಯ ಬಗ್ಗೆ ವಿವರವಾದ ಸ್ಥಿತಿಗತಿ ವರದಿ ಸಲ್ಲಿಸುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪುತ್ತೂರು ಉಪ ವಿಭಾಗಾಧಿಕಾರಿ ಹಾಗೂ ಬೆಳ್ತಂಗಡಿ ತಹಶೀಲ್ದಾರ್ ಅವರನ್ನು ಎರಡೂ ಪ್ರಕರಣಗಳಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ, ಸಂಬಂಧಿತ ಸಂಸ್ಥೆಯು 2008ರ ಮಾರಾಟ ಪತ್ರದ ಆಧಾರದ ಮೇಲೆ ಪಕ್ಕದ ಸರ್ವೆ ಸಂಖ್ಯೆಯಲ್ಲಿ ಭೂಮಿ ಖರೀದಿಸಿಕೊಂಡಿದ್ದರೂ, ಅದರ ಪಕ್ಕದ ಸರ್ಕಾರಿ ಭೂಮಿಯನ್ನೂ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೆ, ಈ ಭೂಮಿಯ ಮಾರುಕಟ್ಟೆ ಮೌಲ್ಯವು ಸುಮಾರು 2 ಕೋಟಿ ರೂಪಾಯಿ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕರ್ನಾಟಕ ಭೂಕಬಳಿಕೆ (ನಿಷೇಧ) ಕಾಯ್ದೆ 2011ರ ಅಡಿಯಲ್ಲಿ ಅತಿಕ್ರಮಣ ತೆರವುಗೊಳಿಸಿ ಭೂಮಿಯನ್ನು ಸರ್ಕಾರಕ್ಕೆ ಹಸ್ತಾಂತರಿಸುವಂತೆ ಹಾಗೂ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಪ್ರಕರಣದ ಮುಂದಿನ ವಿಚಾರಣೆ ಜುಲೈ 20 ಹಾಗೂ ಸೆಪ್ಟೆಂಬರ್ 18ರಂದು ನಿಗದಿಯಾಗಿದ್ದು, ಈ ಬೆಳವಣಿಗೆ ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.