



ಡೈಲಿವಾರ್ತೆ:20/ಏಪ್ರಿಲ್ /2026

ಹುಬ್ಬಳ್ಳಿಯಲ್ಲಿ ತಪ್ಪಿದ ವಿಮಾನ ದುರಂತ: 4 ಗಂಟೆ ಕಾಲ ಆಗಸದಲ್ಲೇ ಸಾವು-ಬದುಕಿನ ಹೋರಾಟ!

ಹುಬ್ಬಳ್ಳಿ: ತಾಂತ್ರಿಕ ದೋಷದಿಂದಾಗಿ ನಿಯಂತ್ರಣ ಕಳೆದುಕೊಂಡ ವಿಮಾನವೊಂದು ಸುಮಾರು ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಸುತ್ತು ಹೊಡೆದ ಘಟನೆ ನಡೆದಿದ್ದು, ನೂರಾರು ಪ್ರಯಾಣಿಕರು ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಬರಬೇಕಿದ್ದ ಫ್ಲೈ91 (Fly91) ಸಂಸ್ಥೆಯ ವಿಮಾನದಲ್ಲಿ ಈ ಆತಂಕಕಾರಿ ಘಟನೆ ಸಂಭವಿಸಿದೆ.
ಘಟನೆಯ ವಿವರ:
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿನ್ನೆ ಮಧ್ಯಾಹ್ನ 3 ಗಂಟೆಗೆ Fly91 ಏರ್‌ಲೈನ್ಸ್‌ನ IC3401 (ATR-72) ವಿಮಾನವು ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿತ್ತು. ನಿಗದಿತ ವೇಳಾಪಟ್ಟಿಯಂತೆ ಸಂಜೆ 4:30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈ ವಿಮಾನ ಲ್ಯಾಂಡ್ ಆಗಬೇಕಿತ್ತು. ಆದರೆ, ಹುಬ್ಬಳ್ಳಿಯ ಸಮೀಪಕ್ಕೆ ಬರುತ್ತಿದ್ದಂತೆಯೇ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು, ಪೈಲಟ್‌ಗಳ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ.
ಹುಬ್ಬಳ್ಳಿಯಲ್ಲಿ ಇಳಿಯಬೇಕಿದ್ದ ವಿಮಾನ ತಾಂತ್ರಿಕ ಕಾರಣಗಳಿಂದಾಗಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ವಿಮಾನವು ಸುಮಾರು ನಾಲ್ಕು ಗಂಟೆಗಳ ಕಾಲ ಮುಂಡಗೋಡ, ದಾವಣಗೆರೆ ಹಾಗೂ ಶಿವಮೊಗ್ಗ ಭಾಗದ ಆಗಸದಲ್ಲಿ ನಿರಂತರವಾಗಿ ಸುತ್ತಾಟ ನಡೆಸಿದೆ. ಇಂಧನ ಖಾಲಿಯಾಗುವ ಭೀತಿ ಮತ್ತು ತಾಂತ್ರಿಕ ಅಸ್ಥಿರತೆಯ ನಡುವೆಯೂ ಪೈಲಟ್‌ಗಳು ಹರಸಾಹಸ ಪಟ್ಟಿದ್ದಾರೆ.
ಅಂತಿಮವಾಗಿ ಸಂಜೆ 7:30ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿಯುವ ಮೂಲಕ ದೊಡ್ಡದೊಂದು ದುರಂತ ತಪ್ಪಿದೆ.
ಜೀವ ಕೈಯಲ್ಲಿ ಹಿಡಿದಿದ್ದ ಪ್ರಯಾಣಿಕರು:
ವಿಮಾನವು ಇಳಿಯದೆಯೇ ಆಕಾಶದಲ್ಲಿ ಸುತ್ತಾಡುತ್ತಿದ್ದನ್ನು ಕಂಡು ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಒಳಗಿದ್ದ ಸಣ್ಣ ಮಕ್ಕಳು ಹಾಗೂ ವೃದ್ಧರು ಕಣ್ಣೀರಿಡುತ್ತಾ ದೇವರಿಗೆ ಮೊರೆ ಹೋಗಿದ್ದರು. ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ, ಅನೇಕ ಪ್ರಯಾಣಿಕರು ತಾವು ಬದುಕುವುದು ಅಸಾಧ್ಯವೆಂದು ಭಾವಿಸಿ, ತಮ್ಮ ಕುಟುಂಬಸ್ಥರಿಗೆ ಮೊಬೈಲ್ ಮೂಲಕ ಅಂತಿಮ ಸಂದೇಶಗಳನ್ನು ಕಳುಹಿಸಿದ್ದರು. ವಿಮಾನದೊಳಗಿನ ಆ ಕ್ರೂರ ಕ್ಷಣಗಳು ಪ್ರಯಾಣಿಕರನ್ನು ಅಕ್ಷರಶಃ ನಡುಗಿಸಿವೆ.
ಏರ್‌ಲೈನ್ಸ್ ವಿರುದ್ಧ ಆಕ್ರೋಶ:
ಮತ್ತೊಂದೆಡೆ, ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರ ಸಂಬಂಧಿಕರು Fly91 ಏರ್‌ಲೈನ್ಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ವಿಮಾನ ಕಾಣೆಯಾಗಿದೆ ಅಥವಾ ತಾಂತ್ರಿಕ ಸಮಸ್ಯೆಯಲ್ಲಿದೆ ಎಂಬ ಕನಿಷ್ಠ ಮಾಹಿತಿಯನ್ನೂ ಸಿಬ್ಬಂದಿ ನಮಗೆ ನೀಡಲಿಲ್ಲ. ಅವರ ನಿರ್ಲಕ್ಷ್ಯವೇ ಈ ಆತಂಕಕ್ಕೆ ಕಾರಣ ಎಂದು ಕುಟುಂಬಸ್ಥರು ಕಿಡಿಕಾರಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ವಿಮಾನ ಲ್ಯಾಂಡ್ ಆಗಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ವಿಮಾನದ ತಾಂತ್ರಿಕ ದೋಷದ ಕುರಿತು ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.