ಡೈಲಿವಾರ್ತೆ:19/ಏಪ್ರಿಲ್ /2026

ಪರ್ಕಳದ ಹಿರಿಯ ಕಾಂಗ್ರೆಸ್ ಮುಖಂಡ, ಸ್ವರ್ಣೋದ್ಯಮಿ ಗೋಪಾಲ್ ಆಚಾರ್ಯ ನಿಧನ

ಪರ್ಕಳ, ಏಪ್ರಿಲ್ 19: ಪರ್ಕಳ ಪೇಟೆಯ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಖ್ಯಾತ ಸ್ವರ್ಣೋದ್ಯಮಿ ಗೋಪಾಲ್ ಆಚಾರ್ಯ (74) ಅವರು ಏಪ್ರಿಲ್ 18 ರಂದು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು.

ಗೋಪಾಲ್ ಆಚಾರ್ಯ ಅವರು ಪರ್ಕಳ ಕಾಂಗ್ರೆಸ್‌ನ ಹಿರಿಯ ನಾಯಕರಾಗಿ ಹಲವು ವರ್ಷಗಳ ಕಾಲ ಪಕ್ಷದ ಬಲವರ್ಧನೆಗೆ ಶ್ರಮಿಸಿದ್ದು, ಸ್ಥಳೀಯ ಮಟ್ಟದಲ್ಲಿ ಸಂಘಟನೆ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಅವರು ಜನಸಾಮಾನ್ಯರೊಂದಿಗೆ ಆತ್ಮೀಯ ಸಂಪರ್ಕ ಹೊಂದಿದ ನಾಯಕನಾಗಿ ಹೆಸರಾಗಿದ್ದರು.
ಸ್ವರ್ಣೋದ್ಯಮಿಯಾಗಿ ಗುರುತಿಸಿಕೊಂಡಿದ್ದ ಅವರು, ಪರ್ಕಳ ಪಡಿತರ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಪರ್ಕಳ ರೋಟರಿ ಸಂಘದ ಅಧ್ಯಕ್ಷರಾಗಿ ಹಾಗೂ ಹೆರ್ಗ ವಿಶ್ವಕರ್ಮ ಸಮಾಜದ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿಯೂ ಅವರು ಸಕ್ರಿಯರಾಗಿದ್ದರು.
ಇನ್ನು ಅವರು ಶ್ರೀಮತಿ ಮನೋರಮ ಮಧ್ವರಾಜ್ ಮತ್ತು ಪ್ರಮೋದ್ ಮಧ್ವರಾಜ್ ಅವರ ಚುನಾವಣಾ ಪ್ರಚಾರ ಕಾರ್ಯದಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಮೃತರು ಪತ್ನಿ, ಎರಡು ಪುತ್ರರು ಹಾಗೂ ಎರಡು ಪುತ್ರಿಯರನ್ನು ಅಗಲಿದ್ದಾರೆ.
ಗೋಪಾಲ್ ಆಚಾರ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಲು ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸೇರಿದಂತೆ ಹಲವು ಗಣ್ಯರು ಹಾಗೂ ಕಾಂಗ್ರೆಸ್ ಪದಾಧಿಕಾರಿಗಳು ಮೃತರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಪರ್ಕಳ ಭಾಗದಲ್ಲಿ ಜನಮನ ಗೆದ್ದ ನಾಯಕರಾಗಿ ಗುರುತಿಸಿಕೊಂಡಿದ್ದ ಗೋಪಾಲ್ ಆಚಾರ್ಯ ಅವರ ಅಗಲಿಕೆ ಅಪೂರಣೀಯ ನಷ್ಟವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.