



ಡೈಲಿವಾರ್ತೆ:22ಏಪ್ರಿಲ್ /2026

ಕೋಟದಲ್ಲಿ ಏಕಾಂಗಿತನದ ನೋವು: ಮಹಿಳೆ ಆತ್ಮಹತ್ಯೆಗೆ ಶರಣು

ಕೋಟ, ಏಪ್ರಿಲ್ 21: ಜೀವನದ ಏಕಾಂಗಿತನ ಮತ್ತು ವೈಯಕ್ತಿಕ ದುಃಖಗಳಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಟದಲ್ಲಿ ವರದಿಯಾಗಿದೆ.
ಮೃತರನ್ನು ಅಶ್ವಿನಿ ಕಾಮತ್ (59) ಎಂದು ಗುರುತಿಸಲಾಗಿದೆ. ಅವರು ಕೋಟದ ತಮ್ಮ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ಅವರ ಪತಿ ಅಸೌಖ್ಯದಿಂದ ನಿಧನರಾಗಿದ್ದು, ಅದಕ್ಕೂ ಮುನ್ನ ಅವರ ಏಕೈಕ ಮಗಳು ಅರ್ಚನಾ ಕೂಡ ಮೃತಪಟ್ಟಿದ್ದರಿಂದ ಅಶ್ವಿನಿ ಕಾಮತ್ ಮಾನಸಿಕವಾಗಿ ತೀವ್ರವಾಗಿ ನೊಂದುಕೊಂಡಿದ್ದರು ಎನ್ನಲಾಗಿದೆ.
ಪಿರ್ಯಾದಿದಾರರಾದ ಅವರ ಸಹೋದರ ಗಣೇಶ್ ಪ್ರಭು (58) ಅವರು ಏಪ್ರಿಲ್ 20 ರಂದು ರಾತ್ರಿ ಸುಮಾರು 9:30ಕ್ಕೆ ಅಕ್ಕನಿಗೆ ಕರೆಮಾಡಿ ಯೋಗಕ್ಷೇಮ ವಿಚಾರಿಸಿದ್ದರು. ಆದರೆ ಏಪ್ರಿಲ್ 21ರಂದು ಬೆಳಿಗ್ಗೆ 10:30ಕ್ಕೆ ಕರೆಮಾಡಿದಾಗ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಅವರು ತಕ್ಷಣ ಕೋಟದಲ್ಲಿರುವ ಮನೆಗೆ ಭೇಟಿ ನೀಡಿದ್ದಾರೆ.ಅಲ್ಲಿ ಮನೆಯೊಳಗಿನ ಕೋಣೆಯಲ್ಲಿ ಅಶ್ವಿನಿ ಕಾಮತ್ ಅವರು ಮರದ ಜಂತಿಗೆ ವೇಲ್‌ನಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಜೀವನದ ಬೇಸರದಿಂದ ಅವರು ಈ ಕೃತ್ಯಕ್ಕೆ ಮುಂದಾಗಿರುವ ಸಾಧ್ಯತೆ ಇದ್ದು, ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಪಿರ್ಯಾದಿಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಕ್ರಮಾಂಕ 16/2026ರಡಿ ಕಲಂ 194 BNSS ಅನ್ವಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.