ಡೈಲಿವಾರ್ತೆ:22ಏಪ್ರಿಲ್ /2026

ಮಂಗಳೂರಿನಲ್ಲಿ ವರುಣನ ಆರ್ಭಟ: ಗೋಡೆ ಕುಸಿದು ಕಾರುಗಳು ಜಖಂ, ಮನೆಯ ಮೇಲೆ ಮರ ಬಿದ್ದು ಭಾರೀ ಹಾನಿ

ಮಂಗಳೂರು, ಎಪ್ರಿಲ್ 22: ನಸುಕಿನ ಮೂರು ಗಂಟೆ ಸುಮಾರಿಗೆ ಮಂಗಳೂರು ನಗರದ ಕೆಲವು ಭಾಗಗಳಲ್ಲಿ ಮಿಂಚು-ಸಿಡಿಲಿನ ಆರ್ಭಟದೊಂದಿಗೆ ಗಾಳಿ-ಮಳೆಯಾಗಿದ್ದು, ಹಲವೆಡೆ ಅವಾಂತರಗಳು ಸಂಭವಿಸಿದ ಘಟನೆ ವರದಿಯಾಗಿದೆ.

ನಗರದ ಅತ್ತಾವರ ಪ್ರದೇಶದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪದ ಕಂಪೌಂಡ್ ಗೋಡೆ ಕುಸಿದು, ಅಲ್ಲಿಯೇ ಪಾರ್ಕ್ ಮಾಡಿದ್ದ ಐದುಕ್ಕೂ ಹೆಚ್ಚು ಕಾರುಗಳ ಮೇಲೆ ಕಲ್ಲುಗಳು ಬಿದ್ದು ಜಖಂಗೊಂಡಿವೆ.

ದೇವಸ್ಥಾನದಲ್ಲಿ ಬ್ರಹ್ಮಕಲಶ ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿದ್ದ ಹಿನ್ನೆಲೆ ಸ್ಥಳೀಯರು ಗೋಡೆ ಪಕ್ಕದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿದ್ದರು. ಆದರೆ ಅಕಸ್ಮಾತ್ ಸುರಿದ ಗಾಳಿ-ಮಳೆಯಿಂದ ತಡೆಗೋಡೆ ಕುಸಿದು ಕಲ್ಲುಗಳು ಪಾರ್ಕಿಂಗ್ ಪ್ರದೇಶಕ್ಕೆ ಬಿದ್ದ ಪರಿಣಾಮ ವಾಹನಗಳಿಗೆ ಹಾನಿಯಾಗಿದೆ. ಈ ಘಟನೆ ಕಾರು ಮಾಲೀಕರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ.
ಇದೇ ವೇಳೆ, ರಥಬೀದಿ ಸಮೀಪದ ಬಸವನಗುಡಿ ಮಠದ ಬಳಿಯಲ್ಲಿ ಬೃಹತ್ ಅಶ್ವತ್ಥ ಮರವೊಂದು ಮನೆಯ ಮೇಲೆ ಉರುಳಿ ಬಿದ್ದು ಮನೆ ಭಾಗಶಃ ಹಾನಿಯಾಗಿದೆ.

ವರದರಾಜ್ ಶೇಟ್ ಅವರಿಗೆ ಸೇರಿದ ಹಂಚಿನ ಮನೆ ಇದಾಗಿದ್ದು, ಮನೆ ಒಳಗಿದ್ದ ನಾಲ್ಕು ತಿಂಗಳ ಮಗು ಹಾಗೂ ಸುಮಾರು 80 ವರ್ಷದ ಇಬ್ಬರು ವೃದ್ಧರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ವೇಳೆ ಮನೆಯಲ್ಲಿದ್ದ ಐದಾರು ಮಂದಿ ಸಹ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ.

ಬುಧವಾರ ನಸುಕಿನ ವೇಳೆಯಲ್ಲಿ ನಗರದೆಲ್ಲೆಡೆ ಸಮಾನವಾಗಿ ಮಳೆಯಾಗದೆ, ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗಿರುವುದು ಗಮನಾರ್ಹ. ಕದ್ರಿ ಮತ್ತು ಉರ್ವಾ ಭಾಗಗಳಲ್ಲಿ ಮಳೆಯಾಗಿದ್ದರೆ, ಶಕ್ತಿನಗರ ಭಾಗದಲ್ಲಿ ಮಳೆಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಮಿಂಚು-ಸಿಡಿಲಿನ ಆರ್ಭಟವು ಬಹುತೇಕ ನಗರದೆಲ್ಲೆಡೆ ಕಾಣಿಸಿಕೊಂಡಿದೆ.
ಸ್ಥಳೀಯ ಆಡಳಿತದಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ಹಾಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.