



ಡೈಲಿವಾರ್ತೆ: 08/ಮೇ/2026

ದಾವಣಗೆರೆ: ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ, ಕಾಲೇಜು ವಿದ್ಯಾರ್ಥಿ ಸಾವು; 45 ಪ್ರಯಾಣಿಕರಿಗೆ ಗಾಯ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮರಬನಹಳ್ಳಿ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ದುರ್ಘಟನೆಯಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಸುಮಾರು 45 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವಿವರ: ಶುಕ್ರವಾರ ಬೆಳಿಗ್ಗೆ ಸುಮಾರು 9:30 ರ ವೇಳೆಗೆ ದಾವಣಗೆರೆಯಿಂದ ಹೊನ್ನಾಳಿ ಕಡೆಗೆ ತೆರಳುತ್ತಿದ್ದ ಬಸ್, ಮರಬನಹಳ್ಳಿ ಗ್ರಾಮದ ಸಮೀಪ ತಲುಪಿದಾಗ ಈ ಅಪಘಾತ ಸಂಭವಿಸಿದೆ. ಬಸ್ಸಿನ ಹಿಂಭಾಗದ ಆಕ್ಸಲ್ (Axle) ದಿಢೀರನೆ ಮುರಿದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆಯಲ್ಲೇ ಉರುಳಿ ಬಿದ್ದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತಪಟ್ಟ ವಿದ್ಯಾರ್ಥಿಯನ್ನು ಹೊನ್ನಾಳಿ ತಾಲ್ಲೂಕಿನ ಕುಂದ್ರು ಗ್ರಾಮದ ನಿವಾಸಿ ದರ್ಶನ್ (23) ಎಂದು ಗುರುತಿಸಲಾಗಿದೆ. ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ ಇವರು, ಎಂದಿನಂತೆ ಕಾಲೇಜಿಗೆ ತೆರಳಲು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ವಿಧಿ ಆಟವಾಡಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.ಗಾಯಾಳುಗಳ ಸ್ಥಿತಿಬಸ್ಸಿನಲ್ಲಿದ್ದ ಸುಮಾರು 45 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಹೆಚ್ಚಿನವರು ಸಣ್ಣಪುಟ್ಟ ಗಾಯಗಳೊಂದಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರಲ್ಲಿ ಆರು ಜನರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಎಚ್. ತೆಕ್ಕಣ್ಣವರ್ ತಿಳಿಸಿದ್ದಾರೆ.
ಅಪಘಾತಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಚಾಲನೆಯಡಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.