



ಡೈಲಿವಾರ್ತೆ: 08/ಮೇ/2026

ತಮಿಳುನಾಡು ರಾಜಕೀಯ ಸಂಘರ್ಷ: ಟಿವಿಕೆಗೆ ಸರ್ಕಾರ ರಚಿಸಲು ಆಹ್ವಾನಿಸದ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಚನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ನಡೆಯನ್ನು ಖಂಡಿಸಿ ಕಾಂಗ್ರೆಸ್ ಶುಕ್ರವಾರ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಿತು.

ರಾಜ್ಯಪಾಲರು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಕೇಂದ್ರ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.ನಗರದ ಅಣ್ಣಾ ಸಲೈನಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಐಸಿಸಿ ತಮಿಳುನಾಡು ಉಸ್ತುವಾರಿ ಗಿರೀಶ್ ಚೋಡಂಕರ್ ಅವರು ರಾಜ್ಯಪಾಲರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯಪಾಲರಿಗೆ ಸಂವಿಧಾನಬದ್ಧ ಜವಾಬ್ದಾರಿಯಿದೆ. ಆದರೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆದೇಶಗಳನ್ನು ಪಾಲಿಸುತ್ತಿದ್ದಾರೆ. ರಾಜಭವನವು ಈಗ ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಾ ಪ್ರಜಾಪ್ರಭುತ್ವವನ್ನು ಹತ್ತಿಕ್ಕುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಈ ಸಂದರ್ಭದಲ್ಲಿ ಟಿಎನ್‌ಸಿಸಿ ಅಧ್ಯಕ್ಷ ಕೆ. ಸೆಲ್ವಪೆರುಂತಗೈ ಮಾತನಾಡಿ, ಜನಾದೇಶವನ್ನು ಗೌರವಿಸುವುದು ರಾಜ್ಯಪಾಲರ ಆದ್ಯ ಕರ್ತವ್ಯವಾಗಬೇಕು ಎಂದು ಒತ್ತಾಯಿಸಿದರು.ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು, ವಿಜಯ್ ಅವರ ಟಿವಿಕೆ ಮತ್ತು ಕಾಂಗ್ರೆಸ್ ಮೈತ್ರಿಯನ್ನು ಅಧಿಕಾರದಿಂದ ದೂರವಿಡಲು ಗುಪ್ತವಾಗಿ ಕೈಜೋಡಿಸುತ್ತಿವೆ ಎಂಬ ವದಂತಿಗಳ ಬಗ್ಗೆ ಚೋಡಂಕರ್ ಪ್ರತಿಕ್ರಿಯಿಸಿದರು ಅವರು ಒಂದಾಗಲಿ, ತಮಿಳುನಾಡಿನ ಜನರ ಮುಂದೆ ಅವರ ಅಸಲಿ ಬಣ್ಣ ಬಯಲಾಗಲಿ. ಯಾರು ನಿಜವಾದ ಜಾತ್ಯತೀತರು ಮತ್ತು ಯಾರು ಅಧಿಕಾರಕ್ಕಾಗಿ ತತ್ವ ಸಿದ್ಧಾಂತಗಳನ್ನು ಬಲಿಕೊಡುತ್ತಾರೆ ಎಂಬುದು ಜನರಿಗೆ ತಿಳಿಯಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್‌ನ ಪ್ರಮುಖ ಬೇಡಿಕೆಗಳು: 108 ಸ್ಥಾನ ಗೆದ್ದಿರುವ ಅತಿ ದೊಡ್ಡ ಪಕ್ಷವಾದ ಟಿವಿಕೆಯನ್ನು ತಕ್ಷಣವೇ ಸರ್ಕಾರ ರಚಿಸಲು ಆಹ್ವಾನಿಸಬೇಕು.ರಾಜ್ಯಪಾಲರು ರಾಜಕೀಯ ಪ್ರೇರಿತ ನಿರ್ಧಾರಗಳನ್ನು ಕೈಬಿಟ್ಟು, ಸಂವಿಧಾನದ ಆಶಯದಂತೆ ತಟಸ್ಥವಾಗಿ ನಡೆದುಕೊಳ್ಳಬೇಕು.ಡಿಎಂಕೆ ಮೈತ್ರಿ ತೊರೆದು ವಿಜಯ್ ಅವರೊಂದಿಗೆ ಕೈಜೋಡಿಸಿರುವುದು ಬೆನ್ನಿಗೆ ಚೂರಿ ಹಾಕುವ ಕೆಲಸವಲ್ಲ. ಇದು ಜನರ ಬದಲಾವಣೆಯ ತೀರ್ಪಿಗೆ ನಾವು ನೀಡಿದ ಗೌರವ ಎಂದು ಕಾಂಗ್ರೆಸ್ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು 118 ಸ್ಥಾನಗಳ ಅಗತ್ಯವಿದೆ. ಪ್ರಸ್ತುತ ಟಿವಿಕೆ (108) ಮತ್ತು ಕಾಂಗ್ರೆಸ್ (5) ಸೇರಿ ಒಟ್ಟು 113 ಸದಸ್ಯರ ಬಲವಿದ್ದು, ಮ್ಯಾಜಿಕ್ ನಂಬರ್ ತಲುಪಲು ಕೇವಲ 5 ಸ್ಥಾನಗಳ ಕೊರತೆಯಿದೆ. ಈ ಐದು ಸ್ಥಾನಗಳ ಬೆಂಬಲ ಕ್ರೋಢೀಕರಿಸಲು ವಿಜಯ್ ತಂಡ ಪ್ರಯತ್ನ ನಡೆಸುತ್ತಿದ್ದು, ರಾಜ್ಯಪಾಲರ ವಿಳಂಬ ನೀತಿಯು ಈ ಪ್ರಕ್ರಿಯೆಗೆ ಅಡ್ಡಿಯಾಗುತ್ತಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪವಾಗಿದೆ.ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ ಆಗ್ರಹಿಸಿದರು.