ಡೈಲಿವಾರ್ತೆ: 09/ಮೇ/2026

ಗುಂಡ್ಯ ಹೊಳೆಗೆ ಸ್ನಾನಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ಸಾವು​

​ಪುತ್ತೂರು: ಬೇಸಿಗೆ ರಜೆಯ ಸಂಭ್ರಮದಲ್ಲಿದ್ದ ಸ್ನೇಹಿತೆಯರ ಗುಂಪೊಂದು ನದಿಗೆ ಸ್ನಾನಕ್ಕೆ ತೆರಳಿದ್ದಾಗ ಸಂಭವಿಸಿದ ಭೀಕರ ದುರಂತದಲ್ಲಿ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟ ಎಂಬಲ್ಲಿ ನಡೆದಿದೆ.​

ಮೃತರನ್ನು ಅರ್ಪಿತಾ (15) ಮತ್ತು ಸುನೀತಾ (21) ಎಂದು ಗುರುತಿಸಲಾಗಿದೆ. ಈ ಅಕಾಲಿಕ ಸಾವು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.​

ಮೇ 8ರಂದು ಮಧ್ಯಾಹ್ನ ಅರ್ಪಿತಾ, ಸುನೀತಾ, ಅಕ್ಷತಾ ಹಾಗೂ ನೆಟ್ಟಣದ ಶ್ರೇಯಾ ಎಂಬುವರು ಸೇರಿ ಕೊಲ್ಯದಕಟ್ಟ ಸಮೀಪದ ಗುಂಡ್ಯ ಹೊಳೆಗೆ ಸ್ನಾನಕ್ಕೆ ತೆರಳಿದ್ದರು. ಸಂಜೆ ಸುಮಾರು 4:30ರ ಸುಮಾರಿಗೆ ಎಲ್ಲರೂ ನದಿಯಲ್ಲಿ ಈಜಾಡುತ್ತಿದ್ದಾಗ, ಅರ್ಪಿತಾ ಮತ್ತು ಸುನೀತಾ ಅಕಸ್ಮಾತ್ತಾಗಿ ನದಿಯ ಆಳವಾದ ಗುಂಡಿಗೆ ಸಿಲುಕಿದ್ದಾರೆ. ಜೊತೆಯಲ್ಲಿದ್ದ ಸ್ನೇಹಿತೆಯರು ಇಬ್ಬರನ್ನೂ ರಕ್ಷಿಸಲು ಹರಸಾಹಸ ಪಟ್ಟರೂ, ನೀರಿನ ವೇಗ ಮತ್ತು ಆಳಕ್ಕೆ ವಿದ್ಯಾರ್ಥಿನಿಯರು ಅಸಹಾಯಕರಾಗಿ ಮುಳುಗಿದ್ದಾರೆ.

ಘಟನೆಯ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯ ನಿವಾಸಿ ಜಾರ್ಜ್ ಎಂಬವರು ನದಿಯಲ್ಲಿ ತೀವ್ರ ಹುಡುಕಾಟ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಡಬ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಈ ಬಗ್ಗೆ ಅರ್ಪಿತಾ ಅವರ ತಂದೆ ಹರೀಶ್ ಪಿ.ಕೆ. ಅವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.​ ಕುಟ್ರುಪ್ಪಾಡಿ ಭಾಗದ ಈ ನದಿ ಪ್ರದೇಶವು ಹಿಂದಿನಿಂದಲೂ ಅತ್ಯಂತ ಅಪಾಯಕಾರಿಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಹಿಂದೆಯೂ ಇದೇ ಸ್ಥಳದಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದರು. ಆ ಘಟನೆಯ ನೆನಪು ಹಸಿರಾಗಿರುವಾಗಲೇ, ಈಗ ಮತ್ತೊಂದು ದುರಂತ ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

​ಕಮರಿದ ಕನಸುಗಳು​ರಜೆಯ ದಿನಗಳಲ್ಲಿ ಮನೆಯಲ್ಲಿ ನಗುನಗುತ್ತಾ ಕಾಲ ಕಳೆಯಬೇಕಿದ್ದ ಬಾಲಕಿಯರು ಇಂದು ಶವವಾಗಿ ಮನೆಗೆ ಮರಳಿದ್ದಾರೆ. ಉನ್ನತ ಶಿಕ್ಷಣ ಮತ್ತು ಉಜ್ವಲ ಭವಿಷ್ಯದ ಕನಸು ಕಂಡಿದ್ದ ಇಬ್ಬರು ಯುವತಿಯರ ಬದುಕು ನೀರಿನಲ್ಲಿ ಕರಗಿ ಹೋಗಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಕುಟ್ರುಪ್ಪಾಡಿ ಗ್ರಾಮವೇ ಮೌನಕ್ಕೆ ಶರಣಾಗಿದೆ.