ಡೈಲಿವಾರ್ತೆ: 15/ಮೇ/2026

ಸಾಲಿಗ್ರಾಮದಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು​

ಕೋಟ: ಕಾರು, ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೋರ್ವ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 66ರ ಸಾಲಿಗ್ರಾಮದಲ್ಲಿ ಸಂಭವಿಸಿದೆ.

ಬೈಕ್ ಸವಾರ ಕೊರವಾಡಿ ಮೂಲದ ಪ್ರಕಾಶ್ ಮೊಗವೀರ (46) ಮೃತಪಟ್ಟ ದುರ್ದೈವಿ.

ಮೂಲಗಳ ಮಾಹಿತಿ ಪ್ರಕಾರ​: ಮಹಿಳೆಯೊಬ್ಬರು ಮಂಗಳೂರು ನಿಂದ ಕುಂದಾಪುರ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಕಾರು ಮುಂಭಾಗದಲ್ಲಿ ಸಂಚರಿಸುತ್ತಿದ್ದ ಪ್ರಕಾಶ್ ಅವರ ಬೈಕ್‌ಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ​ಡಿಕ್ಕಿಯ ರಭಸಕ್ಕೆ ಪ್ರಕಾಶ್ ಅವರು ರಸ್ತೆಗೆ ಎಸೆಯಲ್ಪಟ್ಟು, ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು.​ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರ ಸಹಾಯದೊಂದಿಗೆ ಗಾಯಾಳುವನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.​​

ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬ್ರಹ್ಮಾವರದ ಶವಗಾರಕ್ಕೆ ರವಾನಿಸಲಾಗಿದೆ.