ಡೈಲಿವಾರ್ತೆ: 20/ನ./2026

ಕೋಡಿಯಲ್ಲಿ ಅನಧಿಕೃತ ಹೋಂ ಸ್ಟೇಗಳ ಹಾವಳಿ; ಅಧಿಕಾರಿಗಳ ಮೌನಕ್ಕೆ ಗ್ರಾಮಸ್ಥರ ಆಕ್ರೋಶ! ಪರವಾನಗಿ ಇಲ್ಲದೆ ಕಾರ್ಯಾಚರಣೆಗೆ ಅವಕಾಶವೇಕೆ? ಅರೆಬೆತ್ತಲೆ ಪ್ರತಿಭಟನೆಯ ಎಚ್ಚರಿಕೆ – ಸುದೀನ ಕೋಡಿ

ಕೋಟ: ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಹೋಂ ಸ್ಟೇಗಳನ್ನು ತಕ್ಷಣ ಬಂದ್ ಮಾಡಿ, ನಿಯಮಬಾಹಿರ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಹಕ್ಕುಪತ್ರ ವಿತರಣೆಯ ಶುಲ್ಕ ಹೆಚ್ಚಳಕ್ಕೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿ ನ.20ರಂದು ಕೋಡಿ ಗ್ರಾಮ ಪಂಚಾಯತ್ ಎದುರು ನೂರಾರು ಗ್ರಾಮಸ್ಥರು ಬೃಹತ್ ಶಾಂತಿಯುತ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಸ್ಥಳೀಯ ನಿವಾಸಿ ಸುದೀನ ಕೋಡಿ ಅವರು ತೆರಿಗೆ ವಂಚನೆ, ಸಿಆರ್‌ಝಡ್ ಉಲ್ಲಂಘನೆ, ಹಕ್ಕುಪತ್ರ ದುರುಪಯೋಗ ಹಾಗೂ ಗ್ರಾಮದಲ್ಲಿ ನಿಯಮಬಾಹಿರವಾಗಿ ನಡೆಯುತ್ತಿರುವ ಹೋಂ ಸ್ಟೇಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂಬ ಉದ್ದೇಶದಿಂದ ಗ್ರಾಮಸ್ಥರು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದಾರೆ ಎಂದರು.

ಹಿಂದೆ ಹಕ್ಕುಪತ್ರ ಪಡೆಯಲು ₹5,000 ಶುಲ್ಕವಿದ್ದು, ಇದೀಗ ₹9,500ಕ್ಕೆ ಹೆಚ್ಚಿಸಲಾಗಿದೆ. ಜಾಗದ ಮೌಲ್ಯಮಾಪನ ಹೆಚ್ಚಳದಿಂದ ಶುಲ್ಕ ಏರಿಕೆಯಾಗಿದೆ ಎಂದು ಅಧಿಕಾರಿಗಳು ಸಮರ್ಥಿಸುತ್ತಿದ್ದಾರೆ. ಆದರೆ ಉಡುಪಿ ಜಿಲ್ಲೆಯ ಕೊಡೂರು ಗ್ರಾಮದಲ್ಲಿ ₹500 ಶುಲ್ಕವೇ ಮುಂದುವರಿದಿದೆ. ಹಾಗಾದರೆ ಕೋಡಿ ಗ್ರಾಮದಲ್ಲಿ ಮಾತ್ರ ಶುಲ್ಕ ಹೆಚ್ಚಳಕ್ಕೆ ಕಾರಣವೇನು? ಮುಂದಿನ ದಿನಗಳಲ್ಲಿ ಶುಲ್ಕ ₹20,000ಕ್ಕೆ ಏರಿಕೆಯಾದರೆ ಬಡವರು ಹಕ್ಕುಪತ್ರ ಪಡೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಕೋ ಬೇ (COCO BAY) ಹೋಂ ಸ್ಟೇಗೆ ಪಂಚಾಯತ್ ನಿರಾಕ್ಷೇಪಣಾ ಪತ್ರ, ಪೊಲೀಸ್ ಇಲಾಖೆಯ ಎನ್‌ಒಸಿ ಹಾಗೂ ಪ್ರವಾಸೋದ್ಯಮ ಇಲಾಖೆಯ ನೋಂದಣಿ ಇರುವುದರಿಂದ ಮಾತ್ರ ಕಟ್ಟಡ ಕಾನೂನುಬದ್ಧವಾಗುವುದಿಲ್ಲ. ಕಟ್ಟಡಕ್ಕೆ ಅಗತ್ಯವಾದ ಪರವಾನಗಿ ಹಾಗೂ ಸಿಆರ್‌ಝೆಡ್ ಅನುಮತಿ ಇದೆಯೇ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಕಟ್ಟಡ ಪರವಾನಗಿ ಸಲ್ಲಿಸದ ಹಿನ್ನೆಲೆಯಲ್ಲಿ 2026ರ ಅಕ್ಟೋಬರ್ 22ರಂದು ಗ್ರಾಮ ಪಂಚಾಯತ್ ನೋಟಿಸ್ ನೀಡಿದ್ದರೂ ಹೋಂ ಸ್ಟೇ ಕಾರ್ಯಾಚರಣೆ ಮುಂದುವರಿದಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಸಿಆರ್‌ಝೆಡ್ ವಲಯ-3ರಲ್ಲಿ ಬರುವ ಪ್ರದೇಶದಲ್ಲಿ ಸುಮಾರು ₹2 ಕೋಟಿ ಮೌಲ್ಯದ ಕಟ್ಟಡ ನಿರ್ಮಿಸಲು ಯಾವ ಅನುಮತಿ ನೀಡಲಾಗಿದೆ ಎಂಬುದಕ್ಕೂ ಉತ್ತರ ಸಿಗಬೇಕಿದೆ ಎಂದರು.

ಅನಧಿಕೃತ ಕಟ್ಟಡಗಳ ವಿರುದ್ಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರತಿಯನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಹೋಂ ಸ್ಟೇ ಮಾಲೀಕರಿಂದ ಅಧಿಕಾರಿಗಳಿಗೆ ಬೆದರಿಕೆ ಬಂದಿರುವುದಾಗಿ ಪಿಡಿಒ ಹೇಳಿರುವ ಹಿನ್ನೆಲೆಯಲ್ಲಿ ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಹಕ್ಕುಪತ್ರ ಪಡೆಯುವ ಮೊದಲೇ 2021-22ರಲ್ಲಿ ಕಟ್ಟಡಕ್ಕೆ ಡೋರ್ ನಂಬರ್ ನೀಡಿರುವ ಬಗ್ಗೆಯೂ ಪ್ರಶ್ನಿಸಿದ ಅವರು, ಬಡವರು ಮನೆ ನಿರ್ಮಿಸಿ ಡೋರ್ ನಂಬರ್ ಕೇಳಿದರೆ ಹಕ್ಕುಪತ್ರ ಬಂದ ಬಳಿಕ ನೀಡುವುದಾಗಿ ಹೇಳುವ ಅಧಿಕಾರಿಗಳು ಇಂತಹ ಪ್ರಕರಣಗಳಲ್ಲಿ ಯಾವ ನಿಯಮ ಅನುಸರಿಸಿದ್ದಾರೆ? ಕಾನೂನು ಎಲ್ಲರಿಗೂ ಸಮಾನವಾಗಿರಬೇಕು. ಬಡವರಿಗೊಂದು, ಶ್ರೀಮಂತರಿಗೊಂದು ನ್ಯಾಯ ಇರಬಾರದು ಎಂದು ಹೇಳಿದರು.

ಗ್ರಾಮ ಪಂಚಾಯತ್ ಈ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಬೇಕು. ಕಟ್ಟಡ ಪರವಾನಗಿ ಹಾಗೂ ಸಿಆರ್‌ಝೆಡ್ ಅನುಮತಿಗಳನ್ನು ಪರಿಶೀಲಿಸಿ, ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಹೋಂ ಸ್ಟೇ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಹಂತದಲ್ಲಿ ಪಂಚಾಯತ್ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗುವುದು. ಗ್ರಾಮಸ್ಥರಿಗೆ ನ್ಯಾಯ ದೊರೆಯುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಸುದೀನ ಕೋಡಿ ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಅವರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

ಬಳಿಕ ಸಂಬಂಧಪಟ್ಟ ಕೋಕೋ ಬೇ ಹೋಂ ಸ್ಟೇ ಮಾಲೀಕರಿಗೆ ಅಂತಿಮ ನೋಟಿಸ್ ಜಾರಿಗೊಳಿಸಿದರು. ಏಳು ದಿನಗಳೊಳಗೆ, ಅಂದರೆ ನ.27ರೊಳಗೆ ಅಗತ್ಯ ಕಟ್ಟಡ ಪರವಾನಗಿ ಹಾಗೂ ಇತರ ದಾಖಲೆಗಳನ್ನು ಪಂಚಾಯತ್‌ಗೆ ಸಲ್ಲಿಸುವಂತೆ ಗಡುವು ನೀಡಲಾಗಿದೆ. ತಪ್ಪಿದಲ್ಲಿ ನಿರಾಕ್ಷೇಪಣಾ ಪತ್ರ ಹಿಂಪಡೆದು ಹೋಂ ಸ್ಟೇ ಚಟುವಟಿಕೆ ಬಂದ್ ಮಾಡಲು ಹಾಗೂ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುವುದಾಗಿ ತಿಳಿಸಿದರು. ಬಳಿಕ ನೋಟಿಸ್ ಪ್ರತಿಯನ್ನು ಪ್ರತಿಭಟನಾಕಾರರಿಗೆ ನೀಡಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಧಿಕಾರಿ ಅನುಷಾ ಭಟ್, ಕಾರ್ಯದರ್ಶಿ ಉಮೇಶ್, ಎಎಸ್ಐ ಗೋಪಾಲ್ ಪೂಜಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಶಾಂತಿಯುತ ಪ್ರತಿಭಟನೆಯಲ್ಲಿ ಸ್ಥಳೀಯ ಹಿರಿಯರಾದ ಕೃಷ್ಣ ಮಾಸ್ಟರ್, ಪ್ರಮುಖರಾದ ಲೋಹಿತ್ ಕುಂದರ್, ಮಾದವ ಕುಂದರ್, ಸತೀಶ್, ಸಂತೋಷ, ಕೃಷ್ಣ, ಸುಜಾತ, ಜ್ಯೋತಿ ಖಾರ್ವಿ, ಬೇಬಿ, ಲೋಹಿತ್ ಖಾರ್ವಿ, ರಾಜು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.